ರಂಗ ಮಾಲಿಕೆ -೧೯ ರಂಗ ಜಂಗಮ 'ಡಾ.ಶಿವಕುಮಾರ ತಾತ'

 


ಬಣ್ಣದ ಬದುಕು

ರಂಗ ಮಾಲಿಕೆ - ೧೯


ರಂಗ ಜಂಗಮ ' ಡಾ.ಶಿವಕುಮಾರ ತಾತ'


ರಂಗಭೂಮಿ ಮತ್ತು ರಣಭೂಮಿ ಇವೆರಡೂ ಒಂದಕ್ಕೊಂದು ಪರ್ಯಾಯವಾಗಿ ಬಳಸಲ್ಪಡುವ ಪದಗಳಾಗಿವೆ.ಯಾವುದೇ ಭೂಮಿಗೆ ಕಾಲಿಡುವ ಮುನ್ನ ಯೋಧ ಎನ್ನಿಸ ಬೇಕಾದ್ರೆ ಅವರು ಸಕಲ ವಿದ್ಯೆ ಸಂಪನ್ನರಾಗಿದ್ದರೆ ಮಾತ್ರ ಉಳಿಗಾಲ.ಇಲ್ಲವಾದರೆ ಅವರಿಗದುವೆ ಕೊನೆಗಾಲ.ಈ ನಿಟ್ಟಿನಲ್ಲಿ ರಂಗಭೂಮಿಯ ಬಹುತೇಕ ಕಲಾವಿದರು ಬಹುಮುಖ ಪ್ರತಿಭಾಶಾಲಿಯಾಗಲು ಪ್ರಯತ್ನಿಸುವುದರಲ್ಲಿ ತಪ್ಪೇನಿಲ್ಲ.ಆದರೆ ಯಶಸ್ವಿಯಾಗುವ ಅಭಿನೇತೃಗಳು ಮಾತ್ರ ವಿರಳ.ಬಳ್ಳಾರಿ ರಂಗಭೂಮಿಗೆ ಅನ್ವಯಿಸಿದಂತೆ ಅಂತಹ ವಿರಳಾತಿ ವಿರಳರೆಂದರೆ ಅದು ಸಿರುಗುಪ್ಪ ತಾಲ್ಲೂಕಿನ ಕುಡುದರಹಾಳ್ ಗ್ರಾಮದ ಡಾ.ಶಿವಕುಮಾರ ತಾತಾ.

  ಇವರು 1948ರ ಜೂನ್ 01 ರಂದು ಬಾಗಲಕೋಟ ಜಿಲ್ಲೆಯ ಬಾದಾಮಿ ತಾಲೂಕಿನ ಕಟಗೇರಿ ಗ್ರಾಮದ ಕೃಷಿಕ ಬಡಕುಟುಂಬದ ಭದ್ರಣ್ಣ ಮತ್ತು ಪಾರ್ವತಿ ಎಂಬ ದಂಪತಿಗಳ ಮಗನಾಗಿ ಜನಿಸಿದರು. ಇವರು ತಾಯಿ ಗರ್ಭದಲ್ಲಿ 8 ತಿಂಗಳ ಶಿಶುವಿರುವಾಗಲೇ ತಂದೆಯನ್ನು ಕಳೆದುಕೊಂಡರು. ಅಲ್ಲಿಂದ ಅನೇಕ ಸಂಕಷ್ಟಗಳ ನಡುವೆ ಭೂಮಿಗೆ ಬಂದು ಮುಂದೆ ರಂಗ ಜಂಗಮನೆನೆಸಿದರು.

 ಮೂಲತಃ ಬಯಲಾಟದ ಸಾರಥಿಯಾಗಿ ಜನರನ್ನು ನಗಿಸುವ ಹವ್ಯಾಸಿ ಕಲಾವಿದರಾಗಿದ್ದ ಭದ್ರಣ್ಣನವರಿಂದ ಬಳುವಳಿಯಾಗಿ ಶಿವಕುಮಾರಿಗೆ ಬಣ್ಣದ ನಂಟು ಅಂಟಿಕೊಂಡು ಬಂದಿದೆ.ಇವರು ಪ್ರಾಥಮಿಕ ಶಿಕ್ಷಣ ಪಡೆಯುವ ಕಾಲಕ್ಕೆ ನಾಟಕ ಮತ್ತು ಸಂಗೀತದ ಅಭಿರುಚಿ ಇವರನ್ನು ಅವರಿಸಿತು.ಅಂತೆಯೇ ತಮ್ಮ ಎಳೆಯ ವಯಸ್ಸಿನಲ್ಲಿ ಜಾದೂ ವಿದ್ಯೆಯ ಮೂಲಕ ಎಲ್ಲರನ್ನೂ ಮೋಡಿ ಮಾಡಿದ್ದರು. 

  ಅಲ್ಲದೇ ಪ್ರಾರಂಭದಲ್ಲಿ ಬೆಳವಣಿಕಿ ಸಂಗಣ್ಣನ ವೀರಭದ್ರೇಶ್ವರ ನಾಟ್ಯ ಸಂಘದ ನಾಟಕಗಳನ್ನು ನೋಡುವ ಸಲುವಾಗಿ ರಜಾದಿನಗಳಲ್ಲಿ ಗುಡ್ಡಕ್ಕೆ ಹೋಗಿ ಜೇನು ತಂದು ಮಾರಿ, ಬಂದ ಹಣದಲ್ಲಿ ನಾಟಕವನ್ನು ನೋಡುವ ಅತ್ಯಾಸಕ್ತಿಯನ್ನು ಇವರು ಹೊಂದಿದ್ದರು. ಹೀಗೆ ನಾಟಕಗಳನ್ನು ನೋಡುತ್ತಾ, ವಿಮರ್ಶಿಸುತ್ತಾ ತಮ್ಮ 13ನೇ ವಯಸ್ಸಿಗೆ ಕಿರಣಗಿ ರಚನೆಯ ಆದರ್ಶ ಪ್ರೇಮ ನಾಟಕವನ್ನು ಮಾಡಲೆಂದು, ತಮ್ಮ ಗೆಳೆಯರನ್ನೆಲ್ಲ  ಪಾಳು ಮನೆಯೊಂದರಲ್ಲಿ ಸೇರಿಸಿ ಒಂದುವರೆ ವರ್ಷ ಚಿಮಣಿ ಬೆಳಕಿನಲ್ಲಿ ಪ್ರಾಕ್ಟಿಸ್ ಮಾಡಿ ಕೊನೆಗೂ ಆ ನಾಟಕದಲ್ಲಿ ಮೊದಲ ಬಾರಿಗೆ ಖಳನಾಯಕನ ಪಾತ್ರಕ್ಕೆ ಬಣ್ಣ ಹಚ್ಚಿದರು.ನಂತರ ಭಜನಾ ತಂಡದಲ್ಲಿ ಬಾಷಾ ಎಂಬುವವರಿಂದ ಹಾರ್ಮೋನಿಯಂ ಕಲಿತು  ತನಗಿಂತ ಹಿರಿಯರೆನಿಸಿದವರಿಗೆ ಎಚ್.ಎನ್.ಹೂಗಾರರ ವಾತ್ಸಲ್ಯ ನಾಟಕಕ್ಕೆ ಸಂಗೀತ ನಿರ್ದೇಶನ ಮಾಡಿ ನಿನ್ನಿಂದ ಏನು ಆಗೋದಿಲ್ಲವೆಂದು ನಿಂದಸಿದವರಿಂದಲೇ ಸನ್ಮಾನ ಪಡೆದರು.

   ಕಾಲೇಜು ವಿದ್ಯಾಭ್ಯಾಸದ ಜೊತೆಗೆ  ನಾಟಕ ಕಂಪನಿಗಳ ಸಖ್ಯ ಗಳಿಸಿದರು.ಅಲ್ಲದೇ ಕೆಲ್ಲೂರು ಜಾತ್ರೆಯಲ್ಲಿ ಸಿರುಗುಪ್ಪದ ಹುಬ್ಳಿ ಡಾಕ್ಟರ್ ಎಂದೆ ಪ್ರಸಿಧ್ಧರಾದ ವೈದ್ಯ ಆರ್.ಸಿ.ಹಿರೇಮಠರ ಸ್ನೇಹ ಗಳಿಸಿ, ಬಾಗಲಕೋಟೆ ಆಯುರ್ವೇದಿಕ್ ಕಾಲೇಜಿನಲ್ಲಿ ವ್ಯಾಸಂಗ ಮುಗಿಸಿದ ನಂತರ ಹಿರೇಮಠರ ಸಹಾಯದಿಂದ ಕೇವಲ 80 ಮನೆಗಳಿದ್ದ ಕುಡುದರಹಾಳ್ ಗೆ ಬಂದು ವೈದ್ಯ ವೃತ್ತಿ ತರಬೇತಿಗೆ ಸೇರಿದರು.

 ಗ್ರಾಮಕ್ಕೆ ಬಂದ ಹೊಸದರಲ್ಲಿ ಇಡೀ ಗ್ರಾಮದ ತುಂಬೆಲ್ಲ ದುಶ್ಚಟಕ್ಕೆ ಬಲಿಯಾದ ಜನರೇ ಹೇರಳವಾಗಿದ್ದರು. ಅಂತಹ ಸಂದಿಗ್ಧ ಸಮಯದಲ್ಲಿ ಕೆಲವು ಕಲಾವಿದರನ್ನು ಸೇರಿಸಿ ರಕ್ತರಾತ್ರಿ ನಾಟಕವನ್ನು ಮಾಡಿಸಿ ಎಲ್ಲರನ್ನೂ ತಮ್ಮ ತೆಕ್ಕೆಗೆ ತೆಗೆದುಕೊಂಡರು.ಈ ಮೂಲಕ ಆಗ ರಂಗಭೂಮಿಗೆ ಪಾದಾರ್ಪಣೆ ಮಾಡಿದವರಲ್ಲಿ ವೀಣಾ ಆದೋನಿ,ನರಸಿಂಹಮೂರ್ತಿ, ವೆಂಕಟೇಶ ಯಾದವ್ ಸಹ ಒಬ್ಬರು.ಇದಲ್ಲದೇ ಆಗಿನ ಕಾಲದ ಬಹು ಬೇಡಿಕೆಯ ಮತ್ತು ಹೆಚ್ಚಿನ ಸಂಭಾವನೆಯ (₹೧೫೦) ನಟ ಎಲಿವಾಳ ಸಿದ್ದಯ್ಯರ ಕಲಾ ನೈಪುಣ್ಯತೆಯ ಅರಿವಿದ್ದ ಶಿವಕುಮಾರರಿಗೆ ಅವರ ಎಲ್ಲ ನಿಯಮಗಳಿಗನುಸಾರ ಒಪ್ಪಿ ಕುಡುದರಹಾಳ್ ಗೆ ಕರೆತಂದು ಉತ್ತರ ಭೂಪ ನಾಟಕವನ್ನು ನಿರ್ದೇಶಿಸಿ ಮತ್ತು ಅನಿವಾರ್ಯತೆ ಹಾಗೂ ಸುಭದ್ರಮ್ಮ ,ಎಲಿವಾಳ ಸಿದ್ದಯ್ಯರ ಪ್ರೇರೆಣೆಯೊಂದಿಗೆ ಇದೇ ನಾಟಕದಲ್ಲಿ ಎರೆಡೆರಡು ಹಾಸ್ಯ ಪಾತ್ರಗಳನ್ನು ನಿರ್ವಹಿಸಿ ಎಲ್ಲೆಡೆ ಚಿರಪರಿಚಿತರಾದರು.

  ಇದರ ನಡುವೆ ಶಾಂತಮ್ಮ ಎಂಬುವವರೊಂದಿಗೆ ವಿವಾಹವಾಗಿ ನಾಲ್ಕು ಮಕ್ಕಳನ್ನು ಪಡೆದು ಸಂಸಾರ, ರಂಗಭೂಮಿ ಮತ್ತು ವೈದ್ಯ ವೃತ್ತಿ ಈ ಮೂರನ್ನೂ ಅಚ್ಚುಕಟ್ಟಾಗಿ ನಿರ್ವಹಿಸುತ್ತಾ ಸಾಗಿದರು.

 ಹೀಗೊಮ್ಮೆ ಸಿರುಗುಪ್ಪದಲ್ಲಿ ಚಿಂದೋಡಿ ವೀರಪ್ಪರ ನಾಟಕ ಕಂಪನಿ ಬೀಡು ಬಿಟ್ಟಿದ್ದ ಸ್ಥಳಕ್ಕೆ ಹೋಗಿ ತಮ್ಮ ರಚನೆಯ ಸಂತಾನ ಸಾಕೋ? ಬಡತನ ಬೇಕೋ? ನಾಟಕವನ್ನು ಓದಿ ಕಂಪನಿಯ ರಂಗಕ್ಕೆ ಅಳವಡಿಸುವಲ್ಲಿ ಯಶಸ್ವಿಯಾದರು. ಅಲ್ಲಿಂದ ಜಾತ್ರೆ ಉತ್ಸವಗಳಲ್ಲಿ ಬಹಳಷ್ಟು ಪ್ರದರ್ಶನಗಳ ಮೂಲಕ ನಾಡಿನಾದ್ಯಂತ ಹೆಸರಾದರು.ಅದೇ ಸಮಯಕ್ಕೆ ಚಿಂದೋಡಿ ಕುಟುಂಬಕ್ಕೆ ಹತ್ತಿರವಾಗಿದ್ದ ಶಿವಕುಮಾರರಿಗೆ ಗಾನಯೋಗಿ ಪಂಚಾಕ್ಷರಿ ಗವಾಯಿ ಸಿನಿಮಾಕ್ಕೆ ಬುಲಾವ್ ಬಂದಿತು.ಆ ಸಿನಿಮಾದಲ್ಲಿನ ಅನೇಕ ಹಿರಿಯ ಸಹನಟರಿಂದ ನಿರ್ಲಕ್ಷ್ಯ ನಿಷ್ಠುರಗಳಿಂದ ನೊಂದರು, ಮರು ಮಾತಾಡದೆ ಮಂತ್ರವಾದಿ ಪಾತ್ರದ ಮೂಲಕ ಮೌನೋತ್ತರ ನೀಡಿ ಎಲ್ಲರನ್ನೂ ಧಂಗಾಗಿಸಿದರು.ಅಲ್ಲಿಂದ ಆರಂಭವಾದ ಸಿನಿ ಪಯಣದಲ್ಲಿ ಅಣ್ಣ ಬಸವಣ್ಣ,ವಠಾರ,ಬಾಂಧವ್ಯ, ಮೂಕರಾಗ,ಈಶ್ವರ ಅಲ್ಲಾ ನೀನೇ ಎಲ್ಲಾ ಎಂಬಿತ್ಯಾದಿ ಧಾರಾವಾಹಿ, ಟೆಲಿಫಿಲ್ಮಗಳಲ್ಲಿ ತಮ್ಮ ಅಭಿನಯದ ಛಾಪು ಮೂಡಿಸಿ ಮನೆ ಮಾತಾದರು.

ರಂಗಭೂಮಿ ಒಂದೆಯಲ್ಲದೆ ಸಾಹಿತ್ಯ, ಸಂಗೀತ, ಚಿತ್ರಕಲೆ( ಜಮಖಂಡಿ ತಾಲ್ಲೂಕಿಗೆ ಪ್ರಥಮ),ಕ್ರೀಡಾ(ಕುಸ್ತಿ ಸ್ಪರ್ಧೆಯಲ್ಲಿ ಪ್ರಥಮ), ವೈದ್ಯಕೀಯ ರಂಗದಲ್ಲೂ ಮಿಂಚಿ ಬಹುಮುಖ ಪ್ರತಿಭೆ ಎನಿಸಿದರು. 

ರಂಗಭೂಮಿಯಷ್ಟೇ ವೈದ್ಯಕೀಯ ಕ್ಷೇತ್ರದಲ್ಲೂ ಪಾರ್ಶ್ವ ವಾಯು ರೋಗಕ್ಕೂ,ಸಂತಾನ ಭಾಗ್ಯಕ್ಕೂ,ಅಲ್ಲದೇ ದೊಡ್ಡ ನಗರದ ದೊಡ್ಡ ಡಾಕ್ಟರ್ ಗಳಿಂದ ಗುಣಪಡಿಸಲಾಗದ ರೋಗಗಳಿಗೂ ಜೀವಧಾನದ ದಿವ್ಯೌಷಧಿಗಳ ಕಂಡುಕೊಂಡು ಎಲ್ಲರ ಪಾಲಿನ ಸಿದ್ಧಿಪುರುಷರೆನಿಸಿದ್ದಾರೆ.

ಇವರ ರಂಗಕುಂಚದಲ್ಲಿ ಗುಣವಂತ ನನ ಗಂಡ,ಹುಡುಗಿ ಹಿಂಗ್ಯಾಕಾತು,ಗೂಂಡಾಗಿರಿ,ಮೋಜಿನ ಮದುವೆಗಳು,ಗುಂಡು ತುಂಡೇಶ್ವರ ಮತ್ತಿತರೆ ನಾಟಕಗಳು ಅರಳಿವೆ. 

ಶ್ರೀಯುತರ ಕಲಾನೈಪುಣ್ಯತೆಯನ್ನು ಗುರುತಿಸಿದ ಸಂಘ ಸಂಸ್ಥೆಗಳು ಇವರಿಗೆ ಕರ್ನಾಟಕ ಕಲಾ ಕೇಸರಿ,ಹಾಸ್ಯನಟ ಚಕ್ರವರ್ತಿ, ಕಾರಂತ ರತ್ನ ಇನ್ನು ಅನೇಕ ಪ್ರಶಸ್ತಿ ಪುರಸ್ಕಾರ ಹಾಗೂ ಸಿರುಗುಪ್ಪ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸುವ ಭಾಗ್ಯ ದೊರೆತಿವೆ.

ಇಷ್ಟೆಲ್ಲ ಸಾಧನೆಯ ಶಿಖರವೆನಿಸಿದ ಇವರಿಗೆ ಮಕ್ಕಳು ಬೆಳೆದಂತೆಲ್ಲ  ಸಂಸಾರದಲ್ಲಿ ವಿರಸ ಉಂಟಾಗಿ ಸಂಸಾರವೋ ? ಅಥವಾ ರಂಗಭೂಮಿಯೋ ?ಎಂಬ ಆಯ್ಕೆ ಎದುರಾಗಿ ಸಂಸಾರವನ್ನು ತ್ಯಜಿಸಬೇಕಾಗಿ ಬಂದು ಮಕ್ಕಳನ್ನು ಉನ್ನತ ಸ್ಥಾನಕ್ಕೇರಿಸಿ,ಎಲ್ಲ ಸಂಪತ್ತನ್ನು ಬಿಟ್ಟು ಹುಟ್ಟ ಬಟ್ಟೆಯಲ್ಲಿ ಮನೆಯಿಂದ ಹೊರಬಂದು ಅಭಿಮಾನಿಗಳ ಪ್ರೀತ್ಯಾದರಗಳಿಂದ ಗ್ರಾಮದಲ್ಲಿ ತಾಯಮ್ಮ ಆಶ್ರಮವನ್ನು ಸ್ಥಾಪಿಸಿ,ಬಡವರ ,ಕಲಾವಿದರ,ನೊಂದವರ,ಅನಾಥರ ಪಾಲಿಗೆ ಆಶ್ರಯವಾದರು.ಅಲ್ಲದೇ ಇದ್ದೂರಲ್ಲೇ ಎಲಿವಾಳ ಸಿದ್ದಯ್ಯರ ಹೆಸರಲ್ಲಿ ಬಹುವೆಚ್ಚದ ರಂಗಮಂದಿರ ನಿರ್ಮಾಣದಲ್ಲಿ ನಿರತರಾಗಿರುವ 77ರ ಹರೆಯದ ಶಿವಕುಮಾರ ತಾತರಿಗೆ ಈ ಮೂಲಕ ಚೈತನ್ಯ ಮತ್ತು ಉಳ್ಳವರ ಸಹಕಾರ ದೊರೆಯಲೆಂಬುದೇ ಈ ಲೇಖನದ ಆಶಯ.


ಲೇಖನ 

ಆರ್.ಪಿ.ಮಂಜುನಾಥ್. ಬಿ.ಜಿ.ದಿನ್ನೆ

ಸಾಹಿತಿ/ಬರಹಗಾರರು

9379857775

manjuamazing7@gmail.com

Comments

Popular posts from this blog

ರಂಗ ಮಾಲಿಕೆ -೩೭ ನಡೆದಾಡುತ್ತಿದ್ದ ರಕ್ತರಾತ್ರಿ 'ನಾಡಂಗ ಬಸವರಾಜ'

ರಂಗ ಮಾಲಿಕೆ -೨೧ ಆಂಧ್ರ ನಾಟಕ ಪಿತಾಮಹ ಧರ್ಮಾವರಂ ರಾಮಕೃಷ್ಣಮಾಚಾರ್ಯರು

ರಂಗ ಮಾಲಿಕೆ -೨೭ ಅದಮ್ಯ ಚೇತನದ ರಂಗಮಣಿ 'ಸೋಗಿ ನಾಗರತ್ನಮ್ಮ'.