ರಂಗ ಮಾಲಿಕೆ - ೧೬ ಬಳ್ಳಾರಿಯ ರಂಗ ಶಿಖರ - ಬಳ್ಳಾರಿ ರಾಘವ
ಬಣ್ಣದ ಬದುಕು
ರಂಗ ಮಾಲಿಕೆ - ೧೬
ಬಳ್ಳಾರಿಯ ರಂಗ ಶಿಖರ ' ಬಳ್ಳಾರಿ ರಾಘವ '
ಬಳ್ಳಾರಿ ಎಂದರೆ ಈಗಿನ ಬಹಿತೇಕರಿಗೆ ನೆನಪಾಗುವುದು ಅದು ಗಣಿನಾಡು,ಬಿಸಿಲನಾಡು ಎಂಬುದು ಆದರೆ ಹಿಂದೆ ಒಂದು ಕಾಲದಲ್ಲಿ ಬಳ್ಳಾರಿ ಎಂದರೆ ರಂಗಭೂಮಿಯ ತವರೂರು ,ಕಲೆಯ ನಾಡು ಎಂದು ಅನ್ವರ್ಥಕವಾಗಿ ಬಳಸುವ ಕಾಲವೊಂದಿತ್ತು.ಅಂತಹ ಮೇರು ಶಿಖರಕ್ಕೆ ಬಳ್ಳಾರಿಯನ್ನು ಕೊಂಡೊಯ್ದ ಮಹನೀಯರೆಂದರೆ ತಾಡಪತ್ರಿ ರಾಘವ.ಇವರು ಹುಟ್ಟಿದ್ದ ಊರಿನ ಹೆಸರನ್ನೂ ಬಿಟ್ಟು ಮುಂದೆ ಲಾಯರ್ ವೃತ್ತಿ ಮಾಡುತ್ತಾ ಬದುಕು ಮತ್ತು ಹೆಸರು ಕೊಟ್ಟ ಬಳ್ಳಾರಿಯನ್ನು ತಮ್ಮ ಹೆಸರಿಗೆ ಸೇರಿಸಿಕೊಂಡು ಇಡೀ ವಿಶ್ವದಾದ್ಯಂತ ಹೊತ್ತು ತಿರುಗಿ ಮೆರೆಸಿದರು.
ಸುಪ್ರಸಿದ್ಧ ರಂಗ ಕಲಾವಿದ, ನಾಟಕಕಾರ ರಾಘವ ಅವರು ಆಗಸ್ಟ್ 2, 1880ರ ವರ್ಷದಲ್ಲಿ ಬಳ್ಳಾರಿಯಲ್ಲಿ ಜನಿಸಿದರು. ತಂದೆ ನರಸಿಂಹಾಚಾರ್ಯರು ಮತ್ತು ತಾಯಿ ಶೇಷಮ್ಮನವರು. ಬಳ್ಳಾರಿಯಲ್ಲಿ ಎಫ್.ಎ ವಿದ್ಯಾಭ್ಯಾಸವನ್ನು ಪೂರೈಸಿದ ರಾಘವರು ಮುಂದೆ ಮದರಾಸಿನಲ್ಲಿ ಬಿ.ಎ, ಬಿ.ಎಲ್ ಪದವಿ ಗಳಿಸಿದರು. ಧರ್ಮಾವರಂ ರಾಮಕೃಷ್ಣಾಚಾರ್ಯರ ಬಳಿ ವಕೀಲಿ ವೃತ್ತಿ ತರಬೇತಿ ಪಡೆದು 1906ರಲ್ಲಿ ಸ್ವತಂತ್ರ ವಕೀಲರಾಗಿ ಪ್ರಸಿದ್ಧಿ ಗಳಿಸಿದರು. ಮದರಾಸಿನಲ್ಲಿದ್ದಾಗಲೇ ಪಾರಸಿ ಥಿಯೆಟ್ರಿಕಲ್ ಕಂಪನಿಯ ನಾಟಕಗಳನ್ನು ನೋಡುವ ಹವ್ಯಾಸ ಅವರಲ್ಲಿ ಮೂಡಿತ್ತು. ನಟ ದಾದಾಬಾಯಿ ಮಿಸ್ತ್ರಿಯವರ ಅಭಿನಯ ಅವರ ಮೇಲೆ ಅಪಾರ ಪ್ರಭಾವ ಬೀರಿತ್ತು. ರಾಘವರು ಸ್ವಯಂ ಮೊದಲು ಅಭಿನಯಿಸಿದ ನಾಟಕ ‘ಡಾಕ್ಟರ್ ಅಂಡ್ ಅಪಾಥಿಕರಿ’.
ರಂಗಭೂಮಿಯಲ್ಲಿ ಮುಂದೆ ರಾಘವರು ಬಳ್ಳಾರಿಯಲ್ಲಿ ಶಾಮರಾವ್ ವಟ್ಟಂ ಸೋದರರ ನೆರವಿನಿಂದ ಶೇಕ್ಸ್ ಪಿಯರ್ ಕ್ಲಬ್ ಪ್ರಾರಂಭಿಸಿ ಹಲವಾರು ಇಂಗ್ಲಿಷ್ ನಾಟಕಗಳಲ್ಲಿ ಅಭಿನಯಿಸತೊಡಗಿದರು. ಅವರು ಧರ್ಮಾವರಂ ರಾಮಕೃಷ್ಣಾಚಾರ್ಯ, ಕೋಲಾಚಲಂ ಶ್ರೀನಿವಾಸರಾಯರು ಬರೆದು ನಿರ್ದೇಶಿಸುತ್ತಿದ್ದ ಸರಸ ವಿನೋದಿನಿ, ಸುಮನೋರಮ ಸಭಾ ಸಂಸ್ಥೆಗಳಲ್ಲಿ ಪಾತ್ರಧಾರಿಯಾಗಿದ್ದರು. ವಿಜಯನಗರದ ಪತನ ನಾಟಕದಲ್ಲಿ ರಾಘವರು ನಿರ್ವಹಿಸಿದ ಪಠಾನ್ ರುಸ್ತುಮ್ ಪಾತ್ರ ಅವರಿಗೆ ಅಪಾರ ಜನ ಮೆಚ್ಚುಗೆ ತಂದುಕೊಟ್ಟಿತು. ಹರಿಶ್ಚಂದ್ರ, ದಶರಥ, ರಾವಣ ಮುಂತಾದ ಪೌರಾಣಿಕ ಪಾತ್ರಗಳಿಗೆ ಅವರು ಜೀವ ತುಂಬಿದ ಅಭಿನಯ ನೀಡುತ್ತಿದ್ದರು. ಕನ್ನಡದ ಕೈಲಾಸಂ, ಮಾಸ್ತಿ, ಅ.ನ.ಕೃ. ಮೊದಲಾದವರ ನಾಟಕಗಳನ್ನೂ ಪ್ರಯೋಗಿಸಿ ಹೆಸರು ಮಾಡಿದರು. ಕನ್ನಡ, ತೆಲುಗು, ಹಿಂದಿ, ಇಂಗ್ಲಿಷ್ ಭಾಷೆಗಳೆಲ್ಲದರ ನಾಟಕಗಳಲ್ಲಿ ಅವರು ಪ್ರಸಿದ್ಧಿ ಪಡೆದಿದ್ದರು.
ಗಣ್ಯಮಾನ್ಯರಿಂದಲೇ ಮೆಚ್ಚುಗೆ:
೧೯೨೮ರಲ್ಲಿ ರಾಘವರು ಇಂಗ್ಲೆಂಡಿಗೆ ಹೋಗಿ ರಂಗಭೂಮಿ ಚಟುವಟಿಕೆಗಳ ಅಧ್ಯಯನ ನಡೆಸಿದರು. ಲಾರೆನ್ಸ್ ಆಲಿವಿಯರ್ ಮತ್ತು ಚಾರ್ಲ್ಸ್ ಲಾಟನ್ ಮುಂತಾದ ಶ್ರೇಷ್ಠರೊಂದಿಗೆ ಅವರು ಕೆಲಸ ಮಾಡಿದರು. ಅವರು ಬರ್ನಾಡ್ ಷಾ ಅವರ ಮುಂದೆಯೇ ಶೇಕ್ಸ್ ಪಿಯರ್ ನಾಟಕಗಳನ್ನು ಅಭಿನಯಿಸಿ ಪ್ರಶಂಸೆ ಪಡೆದವರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಸ್ತ್ರೀಪಾತ್ರಗಳನ್ನು ಪುರುಷರೇ ಅಭಿನಯಿಸುತ್ತಿದ್ದ ಕಾಲದಲ್ಲಿ ಸ್ತ್ರೀಯರೇ ಅಭಿನಯಿಸುವಂತೆ ಮಾಡಿದ ಕೀರ್ತಿ ರಾಘವರಿಗೆ ಸಲ್ಲುತ್ತದೆ. ಬೆಂಗಳೂರಿನಲ್ಲಿ ಮಹಾತ್ಮ ಗಾಂಧೀಜಿಯವರ ಮುಂದೆ ದೀನ ಬಂಧು ಕಬೀರ್ ನಾಟಕವನ್ನು ಪ್ರದರ್ಶಿಸಿ ಅವರು ಮೆಚ್ಚುಗೆ ಪಡೆದಿದ್ದರು.
ಹಳ್ಳಿಯಿಂದ ಲಂಡನ್ ಗೆ :
ಸಿನಿಮಾ ಮತ್ತು ರಂಗಭೂಮಿ
ರಂಗಭೂಮಿಯಿಂದಲೇ ಗುರುತಿಸಿಕೊಂಡು ನಂತರ ಸಿನಿಮಾ ರಂಗದಲ್ಲಿಯೂ ತಮ್ಮದೇ ದಾಪುಗಾಲು ಹಾಕುತ್ತಲೇ ತಮ್ಮ ಹಚ್ಚೆ ಹೊತ್ತಿದವರು.ಅಲ್ಲದೇ ಹಳ್ಳಿಯಿಂದ ಲಂಡನ್ ನಗರಕ್ಕೂ ಹೋದರು ತಮ್ಮ ಹೆಸರಿನ ಜೊತೆಗೆ ತನ್ನ ಊರನ್ನು ಹೊತ್ಯೊಯ್ದ ಧೀಮಂತರು ಬಳ್ಳಾರಿ ರಾಘವರು.ಇವರು ಅಭಿನಯಿಸಿದ ನಾಟಕಗಳು ನೂರರಾದರೂ ಸಿನಿಮಾ ರಂಗದಲ್ಲಿ ಬಣ್ಣದ ಗುರುತುಗಳು ಬೆರೆಳೆಣಿಕೆಯಷ್ಟು ಉದಾಹರಣೆಗೆ ದ್ರೌಪದಿ ಮಾನ ಸಂರಕ್ಷಣ, ರೈತ ಬಿಡ್ಡು, ಚಂಡಿಕಾ ಮುಂತಾದ ಚಲನಚಿತ್ರಗಳಲ್ಲೂ ಅವರು ಅಭಿನಯಿಸಿದ್ದರು.
ಹವ್ಯಾಸಿ ರಂಗಭೂಮಿಗೆ ಹೆಗಲಾದರು:
ಕನ್ನಡ ರಂಗಭೂಮಿಯ ಬೆಳೆವಣಿಗೆಯಲ್ಲಿ ಒಂದು ಕಾಲದಲ್ಲಿ ವೃತ್ತಿನಿರತರ ಕಂಪನಿಗಳು ಪ್ರಮುಖ ಪಾತ್ರ ವಹಿಸಿ ಜನತೆಯಲ್ಲಿ ಅಭಿಮಾನ ಮೂಡಿಸಿದ್ದುವು. ಸು. 1930ರ ದಶಕದಲ್ಲಿ ವೃತ್ತಿ ರಂಗಭೂಮಿಯ ಇಳಿಮುಖದ ಸೂಚನೆಗಳು ಕಾಣತೊಡಗಿದುವು. ಬದಲಾಗುತ್ತಿದ್ದ ಸಮಾಜಕ್ಕೆ ಕಂಪನಿ ನಾಟಕಗಳು ರುಚಿಸದೇ ಹೋದವು. ಆ ನಾಟಕಗಳ ವಸ್ತು ಮತ್ತು ಶೈಲಿ, ಅವುಗಳಿಗೆ ವ್ಯಯವಾಗುತ್ತಿದ್ದ ಕಾಲ, ಚಲನಚಿತ್ರಗಳ ಪ್ರವೇಶ ಮುಂತಾದವು ಕಂಪನಿ ನಾಟಕಗಳು ರುಚಿಸದೆ ಇದ್ದುದಕ್ಕೆ ಕಾರಣಗಳು. ಇದೇ ಸಮಯಕ್ಕೆ ಸರಿಯಾಗಿ ಕಾಲೇಜುಗಳಲ್ಲಿ ಇಂಗ್ಲಿಷ್ ನಾಟಕಗಳು ಪ್ರಯೋಗಿಸಲ್ಪಡುತ್ತಿದ್ದವು. ವಿದ್ಯಾವಂತ ಜನಕ್ಕೆ ತಾವೂ ಕನ್ನಡದಲ್ಲಿ ನಾಟಕಗಳನ್ನು ಪ್ರಯೋಗಿಸಬೇಕೆಂಬ ಅಭಿಲಾಷೆ ಉಂಟಾಯಿತು. ಕಾಲೇಜು ದಿನಾಚರಣೆ ಇತ್ಯಾದಿಗಳಲ್ಲಿ ನಾಟಕ ಪ್ರಯೋಗ ಅನಿವಾರ್ಯವೆನಿಸಿತ್ತು. ಇದಕ್ಕಾಗಿ ಆಡಲು ಹೊಸ ನಾಟಕಗಳು ಬೇಕಾದುವು. ಈ ನಾಟಕಗಳ ಬರೆವಣಿಗೆ ಪ್ರಧಾನವಾಗಿ ಗದ್ಯ. ಪೌರಾಣಿಕ ಐತಿಹಾಸಿಕ ನಾಟಕಗಳಿಗೆ ಬೇಕಾಗುವಂತೆ ಹೆಚ್ಚು ಪಾಲು ನಾಟಕಗಳಿಗೆ ಉಡಿಗೆತೊಡಿಗೆಗಳಾಗಲಿ, ರಂಗಸಜ್ಜಿಕೆಯಾಗಲಿ, ದೀಪಾಲಂಕಾರವಾಗಲೀ ಬೇಕಿರಲಿಲ್ಲ. ಇದರಿಂದಾಗಿ ಹಲವು ನಾಟಕಗಳು ಕನ್ನಡದಲ್ಲಿ ಬಂದುವು. ಈ ರೀತಿಯಾದ ಬೆಳೆವಣಿಗೆ ಕಾಲೇಜುಗಳಿಗೇ ಸೀಮಿತವಾಗಿರಲಿಲ್ಲ. ಬೇರೆ ಬೇರೆ ರೀತಿಯ ನಾಗರಿಕ ಸಂಘ ಸಂಸ್ಥೆಗಳು ಈ ದಿಸೆಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದ್ದುವು. ಕನ್ನಡ ನಾಡಿನ ವಿವಿಧ ಭಾಗಗಳಲ್ಲಿ ಒಂದು ಕಾಲಕ್ಕೆ ವೃತ್ತಿನಿರತ ನಾಟಕ ಕಂಪನಿಗಳು ಹುಟ್ಟಿಕೊಂಡಂತೆ ವಿಲಾಸಿ ತಂಡಗಳು ಹುಟ್ಟಿಕೊಂಡದ್ದು .ಇಡೀ ಕರ್ನಾಟಕದಲ್ಲಿ ಕೇವಲ ಪಾರ್ಸಿ ಕಂಪನಿ ನಾಟಕಗಳ ಹಾವಳಿ ಮುಳುಗಿದ್ದ ಪ್ರೇಕ್ಷಕರಿಗೆ ನವ್ಯ ನಾಟಕ ರುಚಿಯನ್ನು ಉಣಬಡಿಸುವ ಸಲುವಾಗಿ ಈಗಾಗಲೇ ದೇಶವಿದೇಶಗಳಲ್ಲಿ ಪ್ರಚಿರವಾಗಿದ್ದ ಹವ್ಯಾಸಿ ನಾಟಕಗಳ ಅಭಿರುಚಿಯನ್ನು ಇಲ್ಲಿಯು ಬಿತ್ತರಿಸಲೋಸುಗವೇ 1904 ರಲ್ಲಿ ಅಮೇಚೂರ್ ಡ್ರಮಾಟಿಕ್ ಅಸೋಸಿಯೇಷನ್ (ADA) ರಂಗಮಂದಿರ ಸ್ಥಾಪಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಅಲ್ಲದೆ ಇವರ ಶಿಷ್ಯ ಪರಂಪರೆ ಇಂದಿಗೂ ಸಾಗುತ್ತದೆ ಇವರ ಮೊದಲ ಶಿಷ್ಯ ಜೋಳದ ರಾಶಿ ದೊಡ್ಡನಗೌಡರು,ಗೌಡರ ಶಿಷ್ಯ ವೈ.ಎಂ.ಚಂದ್ರಯ್ಯ,ಚಂದ್ರಯ್ಯರ ಶಿಷ್ಯ ಈಗಿನ ಬೆಳಗಲ್ಲು ವೀರಣ್ಣನವರು ಈ ಪರಂಪರೆಯ ಇಲ್ಲಿಗೆ ಮುಗಿಯದೆ ಇನ್ನೂ ಮುಂದುವರೆಯಲಿ ಎಂಬುದೇ ನಮ್ಮ ಆಶಯ.
ಬಳ್ಳಾರಿಯ ರಾಘವರಿಗೆ ಸಂಘ ಸಂಸ್ಥೆಗಳಿಂದ ಸಾವಿರಾರು ಬಿರುದು ಸನ್ಮಾನಗಳು ದೊರೆತಿದ್ದರೂ, ಭಾರತ ಸರ್ಕಾರದಿಂದ ಅವರಿಗೆ ರಾವ್ ಬಹದ್ದೂರ್ ಪ್ರಶಸ್ತಿ ಸಂದಿದ್ದು ಆಗಿನ ರಂಗಭೂಮಿಗೆ ಕಳಸ ಸಿಕ್ಕಂತಾಗಿತ್ತು. ಇದಲ್ಲದೇ ನಾಟಕ ಹಾಗೂ ಕಲೆಗಳು ಸಾಮಾಜಿಕ ಉದ್ದೇಶಗಳಿಗೆ ಸ್ಪಂದಿಸಬೇಕೆಂಬ ಅಭಿಮತ ಹೊಂದಿದ್ದ ಅಪ್ರತಿಮ ಕಲಾವಿದರಾಗಿದ್ದ ಬಳ್ಳಾರಿ ರಾಘವ ಅವರ ನೆನಪಿನ ಗೌರವಾರ್ಥ ಭಾರತೀಯ ಅಂಚೆ ಇಲಾಖೆಯು ೧೯೮೧ರ ಅಕ್ಟೋಬರ್ ೩೧ರಂದು ಅಂಚೆ ಚೀಟಿಯನ್ನು ಹೊರತಂದಿತ್ತು.ಆದರೆ
ಈ ಮಹಾನ್ ಕಲಾತಪಸ್ವಿ ಬಳ್ಳಾರಿ ರಾಘವರು ಏಪ್ರಿಲ್ 16, 1946ರಂದು ಈ ಲೋಕವನ್ನಗಲಿದರು.ಅಂದಿನಿಂದ ಬಳ್ಳಾರಿ ರಂಗಭೂಮಿ ಬಲವಿಲ್ಲದಾಯಿತು.ಕಡೆಗಣೆಗೆ ಒಳಗಾಯಿತು ಎಂದರೂ ತಪ್ಪಾಗಲಾರದು.
ಲೇಖನ
ಆರ್.ಪಿ.ಮಂಜುನಾಥ್. ಬಿ.ಜಿ.ದಿನ್ನೆ.
ಸಾಹಿತಿ / ಬರಹಗಾರರು
manjuamazing7@gmail.com.
9379857775

Comments
Post a Comment