ಯುಗಾದಿ ಅವಳಿ ಜಾತ್ರೆ - ಆರ್.ಪಿ.ಮಂಜುನಾಥ್.ಬಿ.ಜಿ.ದಿನ್ನೆ





 ನೋಡ ಬನ್ನಿ , ನಮ್ಮೂರ ಯುಗಾದಿ ಅವಳಿ ಜಾತ್ರೆ..!


" ಚೆಂಬೆಳಕಿನ ಸುಳಿಯಲ್ಲಿ
ಹೊಸದೊಂದು ಕಾಂತಿಯಿತ್ತು
ಮಾವಿನ ಬೇವಿನ ಗಿಡದಲ್ಲೊಂದು
ಚಿಗುರು ಹೂವಿನ ಸಂಗಮವಿತ್ತು
ಉದಿಸಿದ ರವಿಯ ಮೊಗದಲ್ಲೊಂದು
ಚೆಲುವಿನ ಬುಗ್ಗೆ ಹೊಡೆದಿತ್ತು
ಯುಗಾದಿಗೆ ನಾಂದಿಯ ಹಾಡಿತ್ತು..!
  ಯುಗಾದಿ ಎಂದರೆ ಕೇವಲ ಭಾರತೀಯ ಹಬ್ಬದ ಆಚರಣೆಯಲ್ಲ.ಹೆಸರೇ ಸೂಚಿಸುವಂತೆ "ಯುಗ + ಆದಿ" ಅಂದರೆ ಹೊಸದೊಂದು ಯುಗದ, ಸಂವತ್ಸರ ,ವರ್ಷದ ಆರಂಭ.ಆದರೆ ನಾವೆಲ್ಲ ಜನವರಿ ೦೧ ನೇ ಹೊಸವರ್ಷವೆಂದು ನಂಬಿದ್ದೇವೆ.ಆದರೆ ನಮ್ಮ ಪೂರ್ವಿಕರು ನಮ್ಮಷ್ಟು ಮೌಢ್ಯರಲ್ಲ.ಅನಕ್ಷರಸ್ಥರಾಗಿದ್ದರೂ, ಅವರ ಹಬ್ಬ - ಆಚರಣೆಗಳ ವಿಚಾರದಲ್ಲಿ ಅವರಷ್ಟು ವಿವೇಕಿಗಳು ಯಾವ ವಿಜ್ಞಾನಿಗಳು ಸಾಟಿಯಾಗಲಾರರು. ಅದಕ್ಕೊಂದು ನಿದರ್ಶನವನ್ನು ಯುಗಾದಿಯ ದೆಸೆಯಲ್ಲಿ ನೀಡುವುದಾದರೆ ಮುಖ್ಯವಾಗಿ ಚಾಂದ್ರಮಾನ ಹಾಗೂ ಸೌರಮಾನ ಎಂಬ ಎರಡು ಪ್ರಭೇದಗಳಿದ್ದು, ಹಿಂದೂ ಧರ್ಮದ ವೇದಾಂಗ ಜ್ಯೋತಿಷ ಶಾಸ್ತ್ರದಿಂದ ನಿರ್ಣಯಗೊಳ್ಳುತ್ತವೆ. ಚಂದ್ರನ ಚಲನೆಯನ್ನಾಧರಿಸಿ, ದಿನಗಣನೆ ಮಾಡುವುದನ್ನು ಚಾಂದ್ರಮಾನ ಹಾಗೂ ಸೂರ್ಯನ ಗತಿಯಿಂದ ಎಣಿಕೆ ಮಾಡುವುದನ್ನು ಸೌರಮಾನ ಎನ್ನುತ್ತಾರೆ. ಕರ್ನಾಟಕದಲ್ಲಿ ಚಾಂದ್ರಮಾನಪದ್ಧತಿ ಮೊದಲಿನಿಂದ ರೂಢಿಯಲ್ಲಿದೆ. ಭೂಮಿಯಿಂದ ನೋಡಿದಾಗ, ಸೂರ್ಯ, ಚಂದ್ರ, ಗ್ರಹಗಳು ನಕ್ಷತ್ರಮಂಡಲದಿಂದಾದ ರಾಶಿಚಕ್ರದಲ್ಲಿ ದಿನೇ ದಿನೇ ಸ್ವಲ್ಪ ಸ್ವಲ್ಪವಾಗಿ ಸಂಚರಿಸಿದಂತೆ ಕಾಣುತ್ತವೆ. ವೇದಾಂಗ ಜ್ಯೋತಿಷದಂತೆ, ಮೊದಲ ನಕ್ಷತ್ರ ಅಶ್ವಿನಿ - ಅಂದರೆ ಮೇಷ ರಾಶಿಯ ೦ - ೧೩:೨೦ ಭಾಗ (ಡಿಗ್ರಿ). ಅಲ್ಲಿ ಸೂರ್ಯನಿದ್ದಾಗ ಭೂಮಿಯ ಉತ್ತರಾರ್ಧಗೋಳದಲ್ಲಿ ಸಸ್ಯಗಳಲ್ಲಿ ಚಿಗುರು ಕಾಣುತ್ತದೆ; ಅಂದರೆ ಹೊಸಹುಟ್ಟು.ಆದ್ದರಿಂದ ಅಶ್ವಿನೀ ನಕ್ಷತ್ರಕ್ಕೆ ರವಿಯು ಪ್ರವೇಶಿಸುವ ಕಾಲವನ್ನು ಹೊಸವರ್ಷ ಎಂದು ಪರಿಗಣಿಸುತ್ತಾರೆ. ಇದೇ ಸೌರಮಾನ ಯುಗಾದಿ. ಸಾಮಾನ್ಯವಾಗಿ ಈಗ ಇದು ಏಪ್ರಿಲ್ ೧೪ ಅಥವಾ ೧೫ ನೇ ತಾರೀಖಿಗೆ ಬೀಳುತ್ತದೆ. ಆದರೆ ಚಂದ್ರನ ಗತಿ ಅತಿವೇಗವಾದ್ದರಿಂದ ಪ್ರತಿ ಪ್ರದಕ್ಷಿಣೆಗೂ ಒಂದೊಂದು ತಿಂಗಳಾಗಿ, ಹನ್ನೆರಡು ಪ್ರದಕ್ಷಿಣೆಗಳಿಗೆ ಸರಿಯಾಗಿ ಒಂದು ಚಾಂದ್ರಮಾನ ಸಂವತ್ಸರವಾಗುತ್ತದೆ.ರವಿಚಂದ್ರರ ಗತಿಯನ್ನವಲಂಬಿಸಿ, ೧೧ ರಿಂದ ೧೩ ಪೂರ್ಣಿಮೆ/ಅಮಾವಾಸ್ಯೆಗಳಿಗೊಂದು ಚಾಂದ್ರಮಾನ ಯುಗಾದಿಯಾಗುತ್ತದೆ. ಈ ಯುಗಾದಿನಿರ್ಣಯದ ಹಿಂದೆ ವೇದಾಂಗ ಜ್ಯೋತಿಷದ ಮಹತ್ತರ ಸಾಧನೆಗಳೇ ಅಡಗಿವೆ; ಅದರಿಂದ ನಮ್ಮ ಪೂರ್ವಿಕರ ಖಗೋಲಗಣಿತದ ಅಪಾರ ಜ್ಞಾನ ವ್ಯಕ್ತವಾಗುತ್ತದೆ.ಇದರ ಅರಿವು ನಮ್ಮಲ್ಲೆರಲ್ಲೂ ಇ(ಲ್ಲದಿ)ದ್ದರೂ ಇಂದಿಗೂ ನಾವು ನೀವೆಲ್ಲರೂ ಪರದೇಶಿಯ ಅಂಧಾಚರಣೆಯ ದಾಸರಾಗಿದ್ದೇವೆ.ಅವರ ಆಚಾರದಲ್ಲಿ ಅವರಿಗಿದ್ದಷ್ಟು ನಂಬಿಕೆ ನಮಗೆ ನಮ್ಮ ಆಚರಣೆಯಲ್ಲಿಲ್ಲ.ಹಾಗೆ ನೋಡಿದರೆ ಈ ವಿಚಾರದಲ್ಲಿ ನಮ್ಮ ಪೂರ್ವಿಕರು ಅನಕ್ಷರಸ್ಥರಾಗಿದ್ದೂ ಅಕ್ಷರಸ್ಥರು.
ಬಹುತೇಕ ಹಳ್ಳಿಗಳಲ್ಲಿ ಈ ಯುಗಾದಿ ದಿನವನ್ನು  ನಮ್ಮ ನಿಮ್ಮ ಪರದೇಶಿ ಹೊಸ ವರ್ಷ ದಿನದ ಹರ್ಷಕ್ಕಿಂತ ಹೆಚ್ಚಾಗಿ ಒಂದು ಕೈ ಮೇಲೆ ಎಂಬಂತೆ ಇಂದಿಗೂ ತುಂಬಾ ಹರ್ಷೋದ್ಗಾರದ ಉತ್ಸವದೊಂದಿಗೆ ಆಚರಿಸುವ ವಾಡಿಕೆ ಉಳಿದಿದೆ.
 ಅದಕ್ಕೆ ಸಾಕ್ಷಿಭೂತಿಯಾಗಿ ನಮ್ಮೂರಿನ ಶ್ರೀ ಈರಣ್ಣ ತಾತ ಮತ್ತು ನಮ್ಮ ಪಕ್ಕದೂರಿನ ಶ್ರೀ ಕಾಳಮ್ಮ ದೇವಿ ಜಾತ್ರೆಗಳ ಕುರಿತಾದ ಮಾಹಿತಿ ನೀಡಲು ಅಣಿಯಾಗಿದ್ದೇನೆ. 
ಈ ಎರಡು ಜಾತ್ರೆಗಳು ತುಂಬಾ ವಿಭಿನ್ನವಾದವುಗಳು. ಈರಣ್ಣನ ಜಾತ್ರೆ ಸೂಯಾಸ್ತ ಆಗುವುದರೊಳಗೆ ಮುಗಿದರೆ ಕಾಳಮ್ಮನ ಜಾತ್ರೆ ಮರುದಿನ ಸೂರ್ಯೋದಯ ಆಗುವ ಮುನ್ನವೇ ಮುಗಿಯುವ ಜಾತ್ರೆ.ಈ ಜಾತ್ರೆಗಳು ಯುಗಾದಿ ದಿನವೇ ಪ್ರಾರಂಭ ಮತ್ತು ಮುಕ್ತಾಯ.    
  ಈರಣ್ಣನ ಜಾತ್ರೆಗಾಗಿ ನಮ್ಮ ಊರಿನಲ್ಲಿ ಯುಗಾದಿಗೆ ವಾರದ ಮುನ್ನವೇ ಊರಿನ ಎಲ್ಲ ದೇವಸ್ಥಾನಗಳನ್ನು ಗುಡಿಸಿ ಸ್ವಚ್ಛಗೊಳಿಸಿ ಸುಣ್ಣ ಬಣ್ಣ ಬಳೆಯಲಾಗುತ್ತದೆ.ತೇರು,ಉಚ್ಛಾಯ ತಿರುಗುವ ಹಾದಿಯುದ್ಧಕ್ಕ ಬೆಳೆದ ಗಿಡಗಂಟೆಗಳನ್ನು ಕಡಿದು ಹಾದಿಯನ್ನು ಹಾಗೂ ಊರಿನ ಬಹುತೇಕ ಮನೆಗಳನ್ನು ಎಲ್ಲರೂ ಸ್ವಚ್ಛ ಮಾಡಿ ಹೂರಣವಾಗಿಟ್ಟುಕೊಳ್ಳುತ್ತಾರೆ. ಅದೂ ಅವರವರ ಅಂತಸ್ತಿಗೆ ಬಿಟ್ಟಿದ್ದು.ಕೆಲವರು ಬಣ್ಣದಿಂದ,ಸುಣ್ಣದಿಂದ ಇನ್ನೂ ಕೆಲವರು ಸಗಣಿ(ಎಂಡೆ)ಯಿಂದ,ಮಣ್ಣಿನಿಂದ ಒಟ್ಟಿನಲ್ಲಿ ಬಹುತೇಕ ಜನರು ಅಚ್ಚುಕಟ್ಟಾಗಿಸುವುದಂತು ಸತ್ಯ.ಅಲ್ಲದೇ ಎಲ್ಲರೂ ಅದರಲ್ಲೂ ಹದಿಹರೆಯ ಯುವಕ ಯುವತಿಯರು ಬಣ್ಣ ಬಣ್ಣದ ಬಟ್ಟೆಗಳನ್ನು ಖರೀದಿಗೆ ಮುಂದಾಗುವರು.ಈ ಒಂದು ಸೀಸನ್ ಗೆ ನಮ್ಮ ಭಾಗದ ಜವಳಿ ವ್ಯಾಪಾರಿಗಳು,ದರ್ಜಿಗಳು ಚಾತಕದಂತೆ ಕಾಯುತ್ತಿರುತ್ತಾರೆ.ಇದಲ್ಲದೇ  ಸುಮಾರು ಏಳೆಂಟು ವರ್ಷದಿಂದ ಈ ಯುಗಾದಿಗಾಗಿ ನಮ್ಮೂರಿನ ಏಕೈಕ ನೋಂದಾಯಿತ ಸಂಸ್ಥೆ 'ಕಾರಂತ ರಂಗಲೋಕ' ಸಂಸ್ಥೆಯ ವತಿಯಿಂದ ಏನಾದರೂ ಒಂದು ಚಟುವಟಿಕೆ ಹಮ್ಮಿಕೊಳ್ಳುತ್ತಾ ಬಂದಿದೆ.ಇಲ್ಲಿಯವರೆಗೆ ವರ್ಷದಿಂದ ವರ್ಷಕ್ಕೆ ಭಿನ್ನವಾಗಿ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ,ಕಬ್ಬಡ್ಡಿ ಟೂರ್ನಿ,ರಂಗೋಲಿ ಸ್ಪರ್ಧೆ,ಸೈಕಲ್ ರೇಸ್,ಕ್ರಿಕೆಟ್‌ ಟೂರ್ನಿ,ನಾಟಕ ಪ್ರದರ್ಶನ,ಬ್ಯಾಂಡ್ ವಾದನ ಹೀಗೆ ಹಲವು ಕಾರ್ಯಕ್ರಮ ಮಾಡುತ್ತಾ ಬಂದಿದೆ.ಇವುಗಳ ರಿಹರ್ಸಲ್ ಒಂದು ತಿಂಗಳಿಂದಲೂ ನಡೆಯುತ್ತದೆ.ಇನ್ನು ಒಂದು ದಿನಕ್ಕೂ ಮುಂಚೆ ತೇರು ,ಉಚ್ಚಾಯವನ್ನು ಹೊರತೆಗೆದು ವರ್ಣಾಲಂಕಾರ ಮಾಡಲಾಗುತ್ತದೆ.ಹಬ್ಬದ ದಿನ ಎಲ್ಲರ ಮನೆಯಲ್ಲೂ ಹೊಳಿಗೆಯ ಘಮಘಮ ಪರಿಮಳ ಊರಿನ ಕೇರಿಕೇರಿಯನ್ನು ಆವರಿಸಿರುತ್ತದೆ.ಅದಕ್ಕಾಗಿ ಬೆಳಿಗ್ಗೆಯಿಂದ ಲಘು ಉಪಹಾರದೊಂದಿಗೆ ಉಪವಾಸವಿದ್ದು ಮಧ್ಯಾಹ್ನದ ವೇಳೆಗೆಲ್ಲ ಜಳಕ ಮಾಡಿ ಹೊಸ ಬಟ್ಟೆ ಧರಿಸಿ ದೇವರ ಪೂಜೆ ನೈವೇದ್ಯಗಳೆಲ್ಲ ಮುಗಿದು ಊಟಕ್ಕೆ ಕುಳಿತರೆ ಎಲ್ಲರೂ ಭಕಾಸುರರೇ.
ಇನ್ನು ಊರಿನ ಗೌಡ ಮತ್ತು ಜಂಗಮರಿಂದ ಅಲಂಕೃತ ತೇರು ,ಉಚ್ಚಾಯಕ್ಕೆ ಪೂಜೆ ಪುನಸ್ಕಾರಗಳ ನಡುವೆ ಬ್ಯಾಂಡ್ ವಾದನ, ಬೊಂಬೆಗಳ ನರ್ತನ ,ಭಜನೆ ಹಾಡು ,ನಂದಿಕೋಲು ಕುಣಿತ ಇವುಗಳೊಂದಿಗೆ ದೊಡ್ಡ ಹಾರಗಳ ಮಾಲಾರ್ಪಣೆಯಾಗಿ ' ಬೋಲೋ ಶ್ರೀ ವೀರೇಶ್ವರ ಮಾರಾಜಿಕೀ' ಎಂದ ತಕ್ಷಣ ಜೈ ಜೈ ಎನ್ನುತ್ತಾ ಮುಂದೆ ಉಚ್ಚಾಯ ಅದರ ಹಿಂದೆ ತೇರು ಎರಡು ಭಕ್ತ ಜನರ ಹರ್ಷೋದ್ಗಾರ ನಡುವೆ ನಿಲ್ಲದೆ ಎದುರು ಬಸವಣ್ಣನಲ್ಲಿಗೆ ಸಾಗುವವು.ಆಗ ಜನರಿಂದ ಎಸೆಯಲ್ಪಟ್ಟ ಮಂಡಕ್ಕಿ ಕಾರದ ನಡುವೆ ತೇರು- ಉಚ್ಛಾಯ ನೋಡುವುದೇ ಒಂದು ಸೌಭಾಗ್ಯ. 
ಅಲ್ಲಿಂದ ಮತ್ತೆ ದೇವಸ್ಥಾನಕ್ಕೆ ಬಂದ ತೇರು - ಉಚ್ಚಾಯವನ್ನು ಎರಡು - ಮೂರು ಬಾರಿ ಹಿಂದಕ್ಕೆ ಮುಂದಕ್ಕೆ ವೇಗವಾಗಿ ಸುತ್ತಾಡಿಸಿ ನಿಲ್ಲಿಸಿದಾಗ ಜನರ ಮಂದಹಾಸದ ಚಪ್ಪಾಳೆಯಲ್ಲಿ ಶ್ರೀ ಈರಣ್ಣನ ನೈಜ ದರ್ಶನವಾಗುವುದು.ನಂತರ ಸಂಜೆ ಏಳೆಂಟು ಗಂಟೆಯಿಂದ ಆರಂಭವಾಗುವ ಸಾಂಸ್ಕೃತಿಕ ಮತ್ತಿತರೆ ಕಾರ್ಯಕ್ರಮಗಳು ರಾತ್ರಿ ೧೦-೧೧ ಕ್ಕೆಲ್ಲಾ ಮುಗಿಯಲೇ ಬೇಕು.ಕಾರಣ ರಾತ್ರಿ ೧೨-೦೧ ಕ್ಕೆಲ್ಲ ಶುರುವಾಗುವ ಕಾಳಮ್ಮನ ಜಾತ್ರೆಗೋಗಲು ಜನರು ತಯಾರಿಯಾಗುತ್ತಾರೆ.
ಪಕ್ಕದೂರಿನ ಕಾಳಮ್ಮನ ಜಾತ್ರೆಯ ತಯಾರಿಯು ಸಹ ನಮ್ಮೂರಿನಂತೆ ನಡೆಯುತ್ತದೆ. ಆದರೆ ಅಲ್ಲಿ ನಡೆಯುವ ಜಾತ್ರೆಗಿಂತ ಅಗ್ನಿಕುಂಡ ಆಯುವ ಮತ್ತು ಕುಂಭಗಳ ದರ್ಶನ ತುಂಬಾ ಪ್ರಾಮುಖ್ಯತೆಯನ್ನು ಪಡೆದಿವೆ. ಜಾತ್ರೆ ನಡೆದ ರಾತ್ರಿ ಟಿಕೇಟ್ ಸಹಿತವಾದ ಸಾಮಾಜಿಕ ನಾಟಕವನ್ನು ಆ ಊರಿನ ಯುವಕರಿಂದ ಪ್ರದರ್ಶನಗೊಳ್ಳುತ್ತದೆ.ಅದನ್ನು ನೋಡಲು ಸುತ್ತಮುತ್ತಲಿನ ಜನಕ್ಕೆ ಹೋಗದಿರಲು ಅಸಾಧ್ಯ. 
ಸುಮಾರು ವರ್ಷಗಳಿಂದ ಇಲ್ಲಿಯವರೆಗೂ ಈ ಪರಂಪರೆ ಹೀಗೆ ಉಳಿದು ಬಂದಿದೆ.ಇದು ಶಿವನ ಪಾರ್ವತಿ ಸ್ವರೂಪಿಯಾದ ಈರಣ್ಣ ಕಾಳಮ್ಮನ ಜಾತ್ರೆಯನ್ನು ಗಂಡ ಹೆಂಡಿರ ಜಾತ್ರೆಯಂತಲೂ ಹಾಗೂ ಮದುವೆಯಾದ ಹೊಸದರಲ್ಲಿ ಈ ಜಾತ್ರೆಯ ತೇರು ಉಚ್ಚಾಯ ನೋಡುವುದರಿಂದ ವರ್ಷ ಕಳೆಯುವುದರೊಳಗೆ ಸಂತಾನದ ಭಾಗ್ಯವಿದೆ ಎಂಬ ಪ್ರತೀತಿಯಿದೆ.ಅದೇನೇ ಇರಲಿ ಈ ಎರಡು ಜಾತ್ರೆಗಳ ವೈಭವ ಮತ್ತು ಸಂತಸವನ್ನು ಕಣ್ತುಂಬಿಸಿಕೊಳ್ಳುವ ರಸಿಕನೇ ಭಾಗ್ಯಶಾಲಿ. ಹಾಗಾದರೆ ತಡಯಾಕೆ ಈ ಬಾರಿಯ ಅವಳಿ ಜಾತ್ರೆಗೆ ನೀವು ನಿಮ್ಮವರೊಂದಿಗೆ ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲ್ಲೂಕಿನಿಂದ ಕೇವಲ ೨೫ ಕಿ.ಮೀ ದೂರದಲ್ಲಿರುವ ಬೈರಗಾಮದಿನ್ನೆ - ಅಕ್ಕತಂಗಿಯರಹಳ್ಳಿಗೆ ಬನ್ನಿ ಯುಗಾದಿ ಹಬ್ಬದ ರಸದೂಟವನ್ನು ಒಂದಾಗಿ ಸವಿಯೋಣ.

ಲೇಖನ
ಆರ್.ಪಿ.ಮಂಜುನಾಥ್.ಬಿ.ಜಿ.ದಿನ್ನೆ
ಸಾಹಿತಿ/ಬರಹಗಾರರು
9379857775
manjuamazing7@gmail.com

Comments

Popular posts from this blog

ರಂಗ ಮಾಲಿಕೆ -೩೭ ನಡೆದಾಡುತ್ತಿದ್ದ ರಕ್ತರಾತ್ರಿ 'ನಾಡಂಗ ಬಸವರಾಜ'

ರಂಗ ಮಾಲಿಕೆ -೨೧ ಆಂಧ್ರ ನಾಟಕ ಪಿತಾಮಹ ಧರ್ಮಾವರಂ ರಾಮಕೃಷ್ಣಮಾಚಾರ್ಯರು

ರಂಗ ಮಾಲಿಕೆ -೨೭ ಅದಮ್ಯ ಚೇತನದ ರಂಗಮಣಿ 'ಸೋಗಿ ನಾಗರತ್ನಮ್ಮ'.