ರಂಗ ಮಾಲಿಕೆ - ೧೭ ಗೂಳ್ಯಂ ವಿಶ್ವನಾಥಸ್ವಾಮಿ


 ಬಣ್ಣದ ಬದುಕು

ರಂಗ ಮಾಲಿಕೆ - ೧೭


ರಂಗಭೂಮಿಯ ಅಗಸ್ತ್ಯ ನಕ್ಷತ್ರ - ಗೂಳ್ಯಂ ವಿಶ್ವನಾಥಸ್ವಾಮಿ


ಕನ್ನಡದ ಬಳಕೆಯಾಗಲಿ ಅಭಿಮಾನವಾಗಲಿ ಹೆಚ್ಚಾಗಿ ಕಾಣಸಿಗುವುದು ಬಳ್ಳಾರಿಗಿಂತ ಬಳ್ಳಾರಿಯ ಗಡಿ ಭಾಗಗಳಲ್ಲಿ. ಅಂತೆಯೇ ರಾಘವ,ಧರ್ಮಾವರಂ ರಾಮಕೃಷ್ಣಮಾಚಾರ್ಯ,ಕೋಲಚಲಂ ಶ್ರೀನಿವಾಸರಾಯರಂತಹ ಅನೇಕ ಮಹನೀಯರು ಬಳ್ಳಾರಿ ಸಾಂಸ್ಕೃತಿಕ ಲೋಕದಲ್ಲಿ ಮೆರೆದಿದ್ದಾರೆ.ಅಂತಹ ಮಹಾನ್ ಚೇತನರಲ್ಲೊಬ್ಬರು ಗೂಳ್ಯಂ ವಿಶ್ವನಾಥ್ ಸ್ವಾಮಿ.

ನೀಳಕಾಯ,ಗಡಸು ಧ್ವನಿ,ಮುಗ್ಧ ನೋಟದ ಸ್ವಾಮಿಯವರ ಚೆಲುವಿನ ರೂಪ ಕಂಡ ಎಂತವರನ್ನು ಮಂತ್ರಮುಗ್ಧರನ್ನಾಗಿಸುತ್ತಿತ್ತು.


ಇವರು ಕ್ರಿ.ಶ.07.07.1957 ರಂದು ಕರ್ನಾಟಕಾಂಧ್ರ ಗಡಿಭಾಗದ ಗೂಳ್ಯಂ ನಲ್ಲಿ ಶಿವಮೂರ್ತಿ ಶರ್ಮ ಮತ್ತು ಹಂಪಾಂಭ ದೇವಿ(ಸಿರುಗುಪ್ಪ ಶಾಸಕ ಸಿರಿಗೇರಿ ಎಚ್.ಎಂ.ರೇವಣಸಿದ್ದಯ್ಯರ ತಂಗಿ)ಯವರ ಮಗನಾಗಿ ಜನಿಸಿದರು.

ಮನೆಯೇ ಮೊದಲ ಪಾಠಶಾಲೆಯಂಬಂತೆ ಮೂಲತಃ ಇವರ ತಂದೆ ಶರ್ಮರು ವೃತ್ತಿಯಲ್ಲಿ ಶಿಕ್ಷಕರಾಗಿದ್ದರಿಂದ ಹಾಗೂ ವಿದ್ಯಾವಂತೆ ಮತ್ತು ಗಾನಜ್ಞಾನವಿದ್ದ ತಾಯಿ ಹಂಪಾಂಭರೇ ಮೊದಲ ಗುರುಗಳಾದರು. ಇವರು ತಮ್ಮ ಪ್ರಾಥಮಿಕ ಗೂಳ್ಯಂನ ಕನ್ನಡ ಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣವನ್ನು ಮುನ್ಸಿಪಲ್ ಹೈಸ್ಕೂಲ್,ಹಾಗೂ ಪಿ.ಯುಸಿಯನ್ನು ವಾರ್ಡ್ಲಾ ಕಾಲೇಜಿನಲ್ಲಿ ರವಿಬೆಳಗೆರೆಯವರ ಜೊತೆಯಲ್ಲಿ ಓದಿದರು.ಅಲ್ಲದೆ ಟಿಸಿಹೆಚ್ ಯನ್ನು ಸಹ ಓದಿ ಅಪ್ಪನ ದುಡಿಮೆಯಿಂದಾಗಿ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದರು.


 ಸ್ವಾಮಿಯವರಲ್ಲಿ  ರಂಗಾಸಕ್ತಿ ಮೂಡಲು ಪ್ರಮುಖವಾಗಿ ಇವರ ತಾಯಿಯಲ್ಲಿನ ಅಲ್ಪವಿದ್ಯೆ ಮತ್ತು ಸಂಗೀತ ಅಭಿರುಚಿ ಹಾಗೂ ಅಪ್ಪನ ಕಲಾ ಮಾರ್ಗದರ್ಶನವೇ ಕಾರಣ ಎನ್ನಬಹುದಾಗಿದೆ.ಅಂತೆಯೇ ಸ್ವಾಮಿಯವರು ತಮ್ಮ ೧೪ ನೇ  ವಯಸ್ಸಿನಲ್ಲಿ ಕರ್ನಾಟಕದ ಷೇಕ್ಸ್‌ಪಿಯರ್ ಕಂದಗಲ್ ಹನುಮಂತರಾಯರ ರಕ್ತರಾತ್ರಿ ನಾಟಕದ ಅಶ್ವತ್ಥಾಮ ಪಾತ್ರಕ್ಕೆ ಬಣ್ಣ  ಹಚ್ಚುವ ಮೂಲಕ  ಮಾಡಿದರು. ಹೀಗೆ ಬಾಲ್ಯದಿಂದಲೇ  ನಾಟಕದ ಹುಚ್ಚು ಹಚ್ಚಿಸಿಕೊಂಡಿದ್ದರಿಂದ ಎಲ್ಲಿ ನಾಟಕವಿದೆ ಎಂದು ತಿಳಿದರೆ ಸಾಕು ಸ್ವಾಮಿಯವರು ಹಾಜರೆಂಬಂತಾಗಿತ್ತು. ಸಾಮಾಜಿಕ,ಪೌರಾಣಿಕ, ಐತಿಹಾಸಿಕ ಹೀಗೆ ನಾನಾ ವಿಧಧ ನಾಟಕಗಳಲ್ಲಿ ಸುಭದ್ರಮ್ಮ ಮನ್ಸೂರ್,ಬೆಳಗಲ್ ವೀರಣ್ಣ,ಶಂಕರ್ ನಾಯ್ಡು,ರಮೇಶಗೌಡ ಪಾಟೀಲ್,ವರಲಕ್ಷ್ಮಿ,ವೀಣಾ ಆದೋನಿ,ಪುರುಷೋತ್ತಮ ಹಂದ್ಯಾಳರಂತಹ ನಟರೊಂದಿಗೆ ಅಭಿನಯಿಸುತ್ತಲೇ ರಕ್ತರಾತ್ರಿ ನಾಟಕದ ಸಾವಿರಾರು ಜನರು ಪ್ರಯೋಗಗಳನ್ನು ಮಾಡಿದ್ದಾರೆ.


ರಂಗಭೂಮಿಯಲ್ಲಿ ಕಳೆದು ಹೋಗುತ್ತಿದ್ದ ಸ್ವಾಮಿಯವರನ್ನು ಶರ್ಮರು ಕರೆತಂದು ೩೨ನೇ ವಯಸ್ಸಿನಲ್ಲಿ ನಾಗರತ್ನಮ್ಮ ಎಂಬುವರೊಡನೆ ವಿವಾಹ ಮಾಡಲಾಯಿತು. ಕಾಲಕಳೆದಂತೆ ತಂದೆಯನ್ನು ಕಳೆದುಕೊಂಡು ಸುನೀತ ,ತೇಜಸ್ವಿನಿ,ಜ್ಞಾನೇಶ್ವರಿ,ರಾಜಗುರು ಎಂಬ ನಾಲ್ಕು ಮಕ್ಕಳ ತಂದೆಯಾದರು.ಆದರೂ ರಂಗದೊಲವಿನಿಂದ ದೂರವಾಗದೆ ಜವಾಬ್ದಾರಿಯನ್ನು ಮರೆತು ಮೂರ್ನಾಲ್ಕು ತಿಂಗಳ ಕಾಲ ಸಿರುಗುಪ್ಪದ ಮನೆಮನೆಗೆ ತೆರಳಿ ಹೆಂಗಸರಿಂದ ಬೈಸಿಕೊಂಡು ಯುವಕರನ್ನು ಕರೆತಂದು ನಾಟಕ ಕಲಿಸಿ ನಂತರ ಭಾವ ರೇವಣ ಸಿದ್ದಯ್ಯರ ಹೆಸರಿನಿಂದ ಬಹುತೇಕರಿಗೆ ಧನಸಹಾಯಕ್ಕಾಗಿ ಟಿಕೇಟ್ ಮಾರಿದ್ದರು. ಅಲ್ಲದೆ ನಾಟಕದ ವಿಚಾರವಾಗಿ ಅದೆಷ್ಟೋ ಬಾರಿ ಮಡದಿಯಿಂದ ನಿರ್ಲಕ್ಷ್ಯಕ್ಕೊಳಗಾಗಿ ಕ್ರಮೇಣವಾಗಿ ನಾಟಕಗಳಿಗೆ ಮಡದಿಗೆ ಹೇಳದೆ ತಾಯಿಗೆ ಪುಸಲಾಯಿಸಿ ಹೋಗುತ್ತಿದ್ದರು. ಇದರ ನಡುವೆ ತಂದೆಯ ಮಾತಿನಂತೆ ಯಾವತ್ತೂ ನಾಟಕದಲ್ಲಿ ಎಡವದಂತೆ, ಮಾತು ಹುಸಿಯಾಗದಂತೆ ನಟಿಸುವ ಸಲುವಾಗಿ ಹಾಗೂ ಮಕ್ಕಳಿಗೆ ತೊಂದರೆಯಾಗದಂತೆ ಕೋಣೆಯೊಂದರಲ್ಲಿ ಇಡೀ ರಾತ್ರಿ ಮಾತಿನ ತಾಲೀಮನಲ್ಲಿರುತ್ತಿದ್ದರು. 


ಈಗಿರುವಾಗಿ ನಿರುದ್ಯೋಗಿ ಸ್ವಾಮಿಯವರ ಅಲೆದಾಟದ ಪರದಾಟವನ್ನು ನೋಡಲಾರದೆ ಹೈಸ್ಕೂಲ್ ಶಿಕ್ಷಕರಾಗಿದ್ದ ಸ್ನೇಹಿತ ಚಂದ್ರಯ್ಯ ಮಠದ್ ,ಶಿವಕುಮಾರೆಂಬುವರು  ಖುದ್ದಾಗಿ ಮನೆಗೆ ಬಂದು, ಇವರ ಅಂಕಪಟ್ಟಿ ದಾಖಲೆಗಳನ್ನು ಹೊಯ್ದು ಅವರಿವರನ್ನು ಸಂಪರ್ಕಿಸಿ, ಕೊನೆಗೆ ಸ್ವಾಮಿಯವರ ಅಣ್ಣ ಕನ್ನಡ ಪಂಡಿತರಾಗಿದ್ದ ಕುಮಾರಸ್ವಾಮಿಯವರ ಧನಸಹಾಯದೊಂದಿಗೆ ಸಂಡೂರಿನ ಮೆಟ್ರಿಕಿ ಸರ್ಕಾರಿ ಶಾಲೆಗೆ ಹಿಂದಿ ಶಿಕ್ಷಕರನ್ನಾಗಿ ಸೇರಿಸಿದರು.ಶಾಲೆಯಲ್ಲಿಯೂ ಸಹ ಮಕ್ಕಳಿಗೆ ಹಿಂದಿ ಕಲಿಕೆಗೆ ಸುಲಭವಾಗಲೆಂದು ಸ್ವಂತ ಹಣದಿಂದ ಅಭ್ಯಾಸ ಪುಸ್ತಕಗಳನ್ನು ಖರೀದಿಸಿ ಕೊಡುತ್ತಿದ್ದರು.ಆಗಾಗ್ಗೆ ಕಿರು ನಾಟಕಗಳನ್ನು ಮಾಡಿಸಿದ್ದರು.

ಶಿಕ್ಷಕರಾಗಿದ್ದರೂ ಸಹ ಪ್ರವೃತ್ತಿ ರಂಗಭೂಮಿ ಬಿಟ್ಟಿರಲಿಲ್ಲ. ನಾಟಕಗಳಲ್ಲಿ,ರಂಗ ತರಬೇತಿ ಶಿಬಿರಗಳಲ್ಲಿ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮಕ್ಕಳಲ್ಲಿ ರಂಗಭೂಮಿ ಒಲವನ್ನು ತುಂಬುವಲ್ಲಿ ಯಶಸ್ವಿಯಾಗಿದ್ದರು.ಅವರಿಂದ  ರಂಗಪ್ರೇಮ ಬೆಳೆಸಿಕೊಂಡವರಲ್ಲಿ ನಾನೂ ಒಬ್ಬ. 


ರಕ್ತರಾತ್ರಿಯ ನಾಟಕದಲ್ಲಿ ಅಶ್ವತ್ಥಾಮನ ಪಾತ್ರವನ್ನು ಅದ್ಭುತವಾಗಿ ನಿರ್ವಹಿಸಿದ ಕಲಾವಿದ ಎಲಿವಾಳ ಸಿದ್ದಯ್ಯರ ಅಭಿನಯವನ್ನು ಅನುಕರಿಸುವ ಅಭಿನಯವೆಂದರೆ ಅದು ಸ್ವಾಮಿಯವರದು. 

ಬಹುತೇಕರನ್ನು ಮುಗ್ಧ ಮಾತಿನ ಮೋಡಿಯಿಂದಲೇ ಆಕರ್ಷಿಸುವ ಮೂಲಕ ತಮ್ಮ ವೃತ್ತಿಗೆ ಅಡೆತಡೆ ಬರದಂತೆ ಬೆಂಗಳೂರು, ಮೈಸೂರು, ರಾಯಚೂರು, ಸಿಂಧನೂರು,ಸಿರುಗುಪ್ಪ, ಆಂಧ್ರಪ್ರದೇಶದ ಕೆಲವು ಭಾಗಗಳಲ್ಲಿ ಸಂಚರಿಸಿ ನಟನಾ ಖಾದ್ಯವನ್ನು ಪ್ರೇಕ್ಷಕರಿಗೆ ಉಣಬಡಿಸಿದ್ದರು.


ಸ್ವಾಮಿಯವರು ಅಭಿನಯದ ಚಾಕಚಕ್ಯತೆಯ ಆಳ ಅರಿತವರು.ಅಂತೆಯೇ ರಂಗಕ್ಕೆ ಬಂದ ಕೂಡಲೇ ತಮ್ಮ ನೋವು ನಲಿವನ್ನೆಲ್ಲರೆತು ಪರಕಾಯ ಪ್ರವೇಶ ಪಡೆಯುತ್ತಿದ್ದರು.ಆ ಮೂಲಕವೇ ಬಳ್ಳಾರಿ ರಂಗಭೂಮಿಯಲ್ಲಿ ಅಗಸ್ತ ನಕ್ಷತ್ರವಾಗಿ ಮಿನುಗಿದ್ದರು.ಅಲ್ಲದೇ ಅಭಿನಯದ ಪಟ್ಟುಗಳಿಂದಲೇ ಮೇರು ನಟರ ಮೂಲಕ ಭೇಷ್ ಎನಿಸಿಕೊಂಡಿದ್ದರು.ಆದರೆ ಇವರ ಅಭಿನಯದ ಸವಿಯನ್ನು ಎಂದೂ ಕುಟುಂಬಕ್ಕೆ ತೃಪ್ತಿಯಿಂದ ಉಣ ಬಡಿಸಲಿಲ್ಲ ಕಾರಣ ರಂಗದ ನೋವು ನಲಿವು ತಮಗೊಬ್ಬರಿಗೆ ಸಿಮೀತವಾಗಿರಿಸಿಕೊಂಡಿದ್ದರು.

ಇವರಲ್ಲಿ ರಂಗಾಸಕ್ತಿ ಮನೆ ಮಾಡಿದ್ದರಿಂದ ಮೊದಲು ಬೆಂಗಳೂರಿನ ಆದರ್ಶ ಫಿಲಂ ಇನ್ಸ್ಟಿಟ್ಯೂಟ್ ನಲ್ಲಿ ಚಿತ್ರನಟ ಅಶೋಕರೊಂದಿಗೆ ನಟನೆಯ ಪಾಠವನ್ನು ಕಲಿತು ಕೆಲವು ಟೆಲಿಫಿಲ್ಮಗಳಲ್ಲಿ ಅಭಿನಯಿಸಿ ಬಳ್ಳಾರಿಗೆ ಬಂದು ರಕ್ತರಾತ್ರಿ,ಗೌಡ್ರಗದ್ಲ,ಪ್ರೀತಿಯೇ ದೇವರು, ಟಿಪ್ಪುಸುಲ್ತಾನ್ ,ರತ್ನ ಮಾಂಗಲ್ಯ,ನರ್ತಕಿ ನಾಯಕಿ ಹೀಗೆ ಅನೇಕ ನಾಟಕಗಳಿಗೆ ಬಣ್ಣ ಹಚ್ಚಿದ್ದಾರೆ.ಅಲ್ಲದೆ ಇವರ ನಿರ್ದೇಶನದಲ್ಲಿ ರಕ್ತರಾತ್ರಿ ನಾಟಕವೊಂದೇ ನೂರಾರು ಪ್ರದರ್ಶನಗಳು ಕಂಡಿವೆ.ಇವರ ಅಶ್ವತ್ಥಾಮ ಪಾತ್ರವನ್ನು ನೋಡಲು ಸಾಹಿತಿ,ಕಲಾವಿದ,ಮಾಜಿ ಸಚಿವ ಎಂ.ಪಿ‌.ಪ್ರಕಾಶರಂತಹ ಅನೇಕ ಗಣ್ಯರು ಖುದ್ದಾಗಿ ಕಾಯ್ದಿದ್ದು ನೋಡುತ್ತಿದ್ದ ಹಲವು ಪ್ರಸಂಗಗಳಿವೆ.


ಇಂತಹ ಮೇರು ನಟರ ನಟನ ಸಂಪತ್ತನ್ನು ಗುರುತಿಸಿ ಇವರಿಗೆ ಬಳ್ಳಾರಿ ರಾಘವ,ಸುಭಾಷ್ ಭರಣಿ ಪ್ರಶಸ್ತಿ ಇನ್ನೂ ಅನೇಕ ಸಂಘ ಸಂಸ್ಥೆಗಳಿಂದ ಸನ್ಮಾನಗಳು ಸಂದಿವೆ.ಎಂದೂ ಪ್ರಶಸ್ತಿ ಪುರಸ್ಕಾರ ಗಳನ್ನು ಅರಸಿ ಹೋಗದೆ ಎಲ್ಲವನ್ನೂ ತಮ್ಮ ಕಲಾ ಶಕ್ತಿಯಿಂದಲೇ ಪಡೆದರು.ಅಲ್ಲದೇ ಕೊನೆಯವರೆಗೆ ಯಾವುದೇ ಆಹಂಕಾರ ಪಡದೆ ಮುಗ್ಧ ಮನಸ್ಸಿನಿಂದಲೇ ಎಲ್ಲವನ್ನೂ ಅಸ್ವಾಧಿಸುವ ಗುಣವನ್ನು ಹೊಂದಿದ್ದರು. ರಕ್ತರಾತ್ರಿ ನಾಟಕದಲ್ಲಿ ಅಶ್ವತ್ಥಾಮ,ದುರ್ಯೋಧನ,ಶಕುನಿ ಪಾತ್ರಗಳಲ್ಲಿ ನಾಡಿನಾದ್ಯಂತ ಹೆಸರಾಗಿದ್ದ ಇವರಿಗೆ ಊರು,ಜಾಗ,ಸಮಯ ಯಾವುದೇ ಇರಲಿ ನಟನೆ ಮಾಡಲು ಅವಕಾಶ ಸಿಕ್ಕರೆ ಸಾಕು ಆಹಾರ್ಯಾಂಶಗಳಿಲ್ಲದಿದ್ದರೂ ಅದ್ಭುತ ನಟನೆ ಮಾಡುವ ನಟ ಭಯಂಕರ ಎನಿಸಿದ್ದರು.


ಬಳ್ಳಾರಿ ರಂಗಭೂಮಿಯಲ್ಲಿ ಮಿನುಗಿದ ಈ ತಾರೆಯ ಮಾರ್ಗದರ್ಶನದಲ್ಲಿ ಅಭಿನಯಿಸಿದ ಗೆಣಿಕಿಹಾಳ್ ತಿಮ್ಮನಗೌಡ, ನಾಗರಾಜ ಉಬ್ಬಲಗಂಡಿ,ಮೋಕ ರಾಮೇಶ್ವರರಂತಹ ಅನೇಕ ಶಿಷ್ಯಕೋಟಿಯನ್ನು ಒಬ್ಬಂಟಿಗರನ್ನಾಗಿಸಿ 11.08.2011ಇಹಲೋಕ ತ್ಯಜಿಸಿದರು.ಇವರು ಇಂದು ನಮ್ಮೊಂದಿಗೆ ಇಲ್ಲದಿರಬಹುದು ಆದರೆ ಇವರ ಕಲಾಶ್ರೀಮಂತಿಕೆ ಇಂದಿಗೂ ಮೆರೆಯುತ್ತಿದೆ.ಇಂತವರು ಇಂದಿನ ಕಲಾಕುಡಿಗಳಿಗೆ ಮಾದರಿಯಾಗಲೇಂಬುದು ಈ ಲೇಖನದ ಆಶಯ.


ಲೇಖನ 

ಆರ್.ಪಿ.ಮಂಜುನಾಥ್. ಬಿ.ಜಿ.ದಿನ್ನೆ.

ಸಾಹಿತಿ / ಬರಹಗಾರರು

manjuamazing7@gmail.com

9379857775

Comments

Popular posts from this blog

ರಂಗ ಮಾಲಿಕೆ -೩೭ ನಡೆದಾಡುತ್ತಿದ್ದ ರಕ್ತರಾತ್ರಿ 'ನಾಡಂಗ ಬಸವರಾಜ'

ರಂಗ ಮಾಲಿಕೆ -೨೧ ಆಂಧ್ರ ನಾಟಕ ಪಿತಾಮಹ ಧರ್ಮಾವರಂ ರಾಮಕೃಷ್ಣಮಾಚಾರ್ಯರು

ರಂಗ ಮಾಲಿಕೆ -೨೭ ಅದಮ್ಯ ಚೇತನದ ರಂಗಮಣಿ 'ಸೋಗಿ ನಾಗರತ್ನಮ್ಮ'.