ರಂಗ ಮಾಲಿಕೆ-_೧೫ 'ರಂಗ ಸಾರಥಿ ' ದಾರದ ಮಿಲ್ ಕೆ.ಪಂಪಾಪತಿ
ಬಣ್ಣದ ಬದುಕು
ರಂಗ ಮಾಲಿಕೆ -೧೫
'ರಂಗ ಸಾರಥಿ' ದಾರದ ಮಿಲ್ ಕೆ.ಪಂಪಾಪತಿ.
ಬಯಲಾಟ ಎಂದ ಕೂಡಲೇ ನೆನಪಾಗುವುದು ಬಳ್ಳಾರಿ ಜಿಲ್ಲೆ. ಮೂಲತಃ ಬಯಲಾಟ ಹುಟ್ಟಿದ್ದೆ ಬಳ್ಳಾರಿಯಲ್ಲಿ ಎಂದು ಸೋಮಸಮುದ್ರದ ಈಶ್ವರ ದೇವಸ್ಥಾನದಲ್ಲಿ ಕಾಣಸಿಗುವ ಶಾಸನದಲ್ಲಿ ಉಲ್ಲೇಖವಾಗಿದೆ.ಅದಲ್ಲದೇ ಇಂದಿನ ಯಕ್ಷಗಾನದ ಮೂಲವೇ ಬಯಲಾಟ. ಇಂತಹ ಬಯಲಾಟದಲ್ಲಿ ಪ್ರಮುಖವಾಗಿ ನೋಡಬಹುದಾದ ಪಾತ್ರವೇ ಸಾರಥಿ.ಈ ಪಾತ್ರದಿಂದಲೇ ನಾಟಕದಲ್ಲಿ ನವರಸಾದಿಗಳು ಪ್ರೇಕ್ಷಕರೆಡೆಗೆ ಹರಿಯುವವು. ಇಂತಹ ಪಾತ್ರವನ್ನು ಅಮೋಘವಾಗಿ ಸುಮಾರು 2300 ಹೆಚ್ಚು ಪ್ರಯೋಗಗಳಲ್ಲಿ ಅಭಿನಯಿಸಿ ಜನಪ್ರಿಯರಾಗಿರುವ ಬಳ್ಳಾರಿಯ ಏಕೈಕ ರಂಗಕಲಾವಿದ ಕೆ.ಪಂಪಾಪತಿ.
ಇವರು ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ (ವಿಜಯನಗರ ಜಿಲ್ಲೆ) ದೇವಲಾಪುರ ಗ್ರಾಮದಲ್ಲಿ ಕೆ ಗಾದೆಪ್ಪ ಮತ್ತು ಗಂಗಮ್ಮ ಎಂಬ ದಂಪತಿಗಳ ಮಗನಾಗಿ ಜನಿಸಿದರು. ಬಾಲ್ಯದಲ್ಲಿ ಅಣ್ಣನ ಲಸ್ಕರ್ ವೃತ್ತಿಯಿಂದ ಬರುತ್ತಿದ್ದ ಸಂಬಳದಲ್ಲಿ ಸಂಸಾರವನ್ನು ನಿಭಾಯಿಸಲಾಗದೆ ನಾಲ್ಕನೇ ತರಗತಿಗೆ ವಿದ್ಯಾಭ್ಯಾಸಕ್ಕೆ ವಿಧಾನವನ್ನು ಹೇಳಿ, ಊರಿನ ಹೆಂಗಸರೊಂದಿಗೆ ಕೂಲಿ ಕೆಲಸಕ್ಕೆ ಹೋದರು.
ಇವರು ಚಿಕ್ಕವಯಸ್ಸಿನಲ್ಲಿ ಊರಿನ ಸುತ್ತಮುತ್ತ ನಡೆಯುತ್ತಿದ್ದ ಬಯಲಾಟಗಳನ್ನು ನೋಡಲು ಮನೆಯಲ್ಲಿ ಎಲ್ಲರೂ ಮಲಗಿದ ನಂತರ ಕದ್ದು ಮುಚ್ಚಿ ಹೋಗುತ್ತಿದ್ದರು. ಈ ಮೂಲಕ ರಂಗ ಪರಿಸರವಿಲ್ಲದೆ ಮನೆಯಲ್ಲಿ ರಂಗ ಚಿಗುರು ಬೆಳೆಯಲಾರಂಭಿಸಿತು. ತಮ್ಮನ್ನು ತಾವೇ ಗುರುವನ್ನಾಗಿಸಿಕೊಂಡು ತಮ್ಮ ಗೆಳೆಯರನ್ನೆಲ್ಲ ಸೇರಿಸಿ ಒಲೆಯ ಬೂದಿ ಮತ್ತು ಇದ್ದಿಲನ್ನೇ ಪ್ರಸಾಧನ ಪರಿಕರಗಳನ್ನಾಗಿಸಿ ನಾಟಕದಾಟವನ್ನು ಆಡುತ್ತಿದ್ದರು.
ಸಂಸಾರದ ನಡುವೆ ಸಾಲದಿರುವ ಸಂಬಳಕ್ಕಾಗಿ ಇದ್ದ ಕೆಲಸವನ್ನು ಬಿಟ್ಟು ಬಳ್ಳಾರಿಯ ಅನೇಕ ದಾರದ ಮಿಲ್ ಗಳಲ್ಲಿ ಕೆಲಸಕ್ಕೆ ಸೇರಿದರು. ಇವರ ವಾಕ್ಚಾತುರ್ಯ,ಮುಂದಾಳತ್ವ ಇವರನ್ನು ಕಾರ್ಮಿಕ ವರ್ಗದ ನಾಯಕರನ್ನಾಗಿಸಿತು. ಅಂತೆಯೇ ಮಿಲ್ಲಿನಲ್ಲಿನ ಕಾರ್ಮಿಕ ವರ್ಗದ ಸಮಸ್ಯೆಗಳಿಗೆ ಧ್ವನಿಯಾಗಿ ಅವರ ಪ್ರೀತಿ ಗಳಿಸಿದರು.
ಒಮ್ಮೆ ಬಳ್ಳಾರಿಯ ಕಂಟೋನ್ಮೆಂಟ್ ಪ್ರದೇಶದಲ್ಲಿ ಬಯಲಾಟ ನಡೆಯುತ್ತಿತ್ತು.ಆಗ ಕೆಲಸ ಮುಗಿಸಿಕೊಂಡು ಬರುತ್ತಿದ್ದ ಇವರನ್ನು ಕಂಡ ಒಡನಾಡಿಗಳು ಈಗಾಗಲೇ ಇವರ ಕಲಾಪ್ರೇಮದ ಅರಿವಿದ್ದಿದ್ದರಿಂದ ಅವರನ್ನು ರಂಜಿಸುವಂತೆ ಕೋರಿದರು. ಅಂತೆಯೇ ಆ ಮೂಲಕ ಅನೇಕ ಅಭಿಮಾನಿಗಳ ಪ್ರೀತಿಗೆ ಪಾತ್ರರಾಗಿ ಕ್ರಿ.ಶ.1972 ರಲ್ಲಿ ಅಲ್ಲಿಪುರದಲ್ಲಿ 'ಗಿರಿಜಾ ಕಲ್ಯಾಣ' ಬಯಲಾಟಕ್ಕೆ ಬಣ್ಣ ಹಚ್ಚುವ ರಂಗಲೋಕದತ್ತ ದಾಪುಗಾಲು ಹಾಕಿದರು. 70ರ ದಶಕದಲ್ಲಿ ಅನಾವರಣಗೊಂಡ ಇವರ ಕಲಾ ಪ್ರಾವೀಣ್ಯತೆ ಇಂದಿನವರೆಗೂ ನಾಡಿನಾದ್ಯಂತ ಪ್ರಸರಿಸಿದೆ.
1972-1987 ರವರೆಗೆ ದಾರದ ಗಿರಿಣಿಯಲ್ಲಿ ಕೆಲಸ ಮಾಡಿ ಅನಿವಾರ್ಯವಾಗಿ ಕಾರ್ಮಿಕ ವರ್ಗದ ಸಮಸ್ಯೆ ಮತ್ತು ಹೋರಾಟದಿಂದಾಗಿ ಕೊನೆಗೂ ಮಿಲ್ ಬಂದಾಗಿ ಅಕ್ಷರಶಃ ಬೀದಿಗಿಳಿದಾಗ ನೆರವಾದದ್ದೆ ರಂಗಕಲೆ.
ಅಂತೆಯೇ 1987 ರ ನಂತರ ಇವರ ಬದುಕು ರಂಗಭೂಮಿಯ ದೆಸೆಯಿಂದ ಬಂಗಾರವಾಯಿತು. ಗಿರಿಜಾ ಕಲ್ಯಾಣ,ರತಿ ಕಲ್ಯಾಣ,ಸುಂದೋಪ ಸುಂದರ,ವೀರ ಅಭಿಮನ್ಯು ಕಾಳಗ, ಭೀಮ ಪ್ರತಿಜ್ಞೆ, ಧರ್ಮಾಶ್ವಮೇಧ ,ಲವಕುಶರ ಕಾಳಗ,ಪಾರ್ಥ ವಿಜಯ,ರೇಣುಕಾದೇವಿ ಮಹಾತ್ಮೆ ಹೀಗೆ 40 ಕ್ಕೂ ಹೆಚ್ಚು ನಾಟಕಗಳು, 2300 ಕ್ಕೂ ಹೆಚ್ಚು ಪ್ರಯೋಗಗಳನ್ನು ಪ್ರದರ್ಶನ ನೀಡಿ ಜನಮನ್ನಣೆ ಗಳಿಸಿದ್ದಾರೆ.
ಇವರಿಗೆ ಕಲೆ ಮತ್ತು ಕಲಾವಿದರ ಬಗ್ಗೆ ಇದ್ದ ಅತೀವ ಕಾಳಜಿಯಿಂದಾಗಿ,ಸ್ವತಃ ಕಲಾವಿದರ ಬದುಕನ್ನು ಕಂಡುಂಡಿದ್ದರಿಂದ 'ಅಮೃತ ಸಂಜೀವಿನಿ ಬಯಲಾಟ ಕಲಾವಿದರ ಸಂಘ' ಸ್ಥಾಪಿಸಿದರು. ಆ ಮೂಲಕ ಕಲಾವಿದರ ಬದುಕಿಗೆ ಸೂರನ್ನು ಕಲ್ಪಿಸುವ ಸಲುವಾಗಿ ಜಿಲ್ಲಾಡಳಿತ ವಿರುದ್ಧ ಸುಧೀರ್ಘ ಹೋರಾಟ ಮಾಡಿ, ಕೆಲ ದಿನಗಳ ಕಾಲ ಸೆರೆವಾಸ ಅನುಭವಿಸಿ ಕೊನೆಗೂ ಜಿಲ್ಲಾಡಳಿತ ನಿವೇಶನಗಳನ್ನು 25 ಕಲಾವಿದರಿಗೆ ಬೆಳಗಲ್ಲು ರಸ್ತೆ ಪ್ರಶಾಂತ್ ನಗರದಲ್ಲಿ ನೀಡುವಂತೆ ಮಾಡಿದರು.
ಇದಲ್ಲದೇ ಒಮ್ಮೆ ಕುರುಗೋಡಿನ ಚನ್ನಪಟ್ಟಣದಲ್ಲಿ ಆಟಕ್ಕೆ ಹೋದಾಗ ಇವರಿಗೆ ಅಲ್ಲಿನ ನಾಟಕದ ಭೀಮ ಪಾತ್ರಧಾರಿಯ ಶ್ರೀಮಂತ ತಂದೆ ನುಡಿದ ' ಲೇ ಸಾರಥಿ ಹಾರ ಹಾಕು' ಎಂಬ ಮಾತಿನಿಂದ ಕ್ರೋಧಗೊಂಡು. ಬೆಳಿಗ್ಗೆ ಆ ವ್ಯಕ್ತಿಗೆ ಕೇವಲ ಗುಟುರು ಮಾತಿನಿಂದ ನೀರಿಳಿಸಿ ಕಲೆ ಮತ್ತು ಕಲಾವಿದರಿಗೆ ಗೌರವಿಸುವಂತೆ ಮಾಡಿದ್ದರು.ಹೀಗೆ ಪಂಪಾಪತಿಯವರ ಜೀವನದುದ್ದಕ್ಕೂ ಹಲವು ಅವಿಸ್ಮರಣೀಯ ಘಟನೆಗಳಿವೆ.
ಇನ್ನು ಇವರ ಕಲೆಯನ್ನು ಮೆಚ್ಚಿ ಅನೇಕ ಗ್ರಾಮದ ಜನರು,ಸಂಘ ಸಂಸ್ಥೆಗಳು 1000 ಕ್ಕೂ ಹೆಚ್ಚು ಸನ್ಮಾನಗಳನ್ನು ಮಾಡಿದ್ದಾರೆ.ಸರ್ಕಾರ ಇವರ ಅಗಾಧ ಕಲಾಸೇವೆಯನ್ನು ಮೆಚ್ಚಿ ಬಯಲಾಟ,ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ,ಕ.ಸಾ.ಪ ಸನ್ಮಾನ,ಹಂಪಿ ಉತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.ಇಷ್ಟೇಲ್ಲಾ ಪ್ರಶಸ್ತಿ,ಸನ್ಮಾನ ಸ್ವೀಕರಿಸಿದ್ದರೂ ಕಂಪ್ಲಿಯ ಮಾವಿನಹಾಳ್ ಗ್ರಾಮದ ಪಾತ್ರಧಾರಿಯಾಗಿದ್ದ ತಂದೆ ಮಗನಿಂದಲೇ ಸ್ವೀಕರಿಸಿದ ಮೊದಲ ಸನ್ಮಾನವನ್ನು ಇಂದಿಗೂ ನೆನೆಯುತ್ತಾರೆ.
ಇಂದಿನ ಆಸಕ್ತ ಯುವ ಪೀಳಿಗೆಗೆ ತಮ್ಮಲ್ಲಿನ ಕಲಾ ಸಂಪತ್ತನ್ನು ಧಾರೆಯೆರೆವ ಮಹಾಧಾಸೆಯನ್ನು ಹೊಂದಿರುವ 70ರ ಹರೆಯ ಪಂಪಾಪತಿಯವರಿಗೆ ನಾವೂ ನೀವೂ ನೆರವಾಗೋಣ..
ಲೇಖನ:
ಆರ್.ಪಿ.ಮಂಜುನಾಥ್. ಬಿ.ಜಿ.ದಿನ್ನೆ.
ಸಾಹಿತಿ/ಬರಹಗಾರರು.
Mob-9379857775
manjuamazing7@gmail.com.

Comments
Post a Comment