ರಂಗ ಮಾಲಿಕೆ -_೧೪ ರಂಗ ಜೀವಾಳ ಬಳ್ಳಾರಿಯ ಹಣ್ಣು ಕಾಯಿ ಶಿವರುದ್ರಯ್ಯಸ್ವಾಮಿ

 


ಬಣ್ಣದ ಬದುಕು..

ರಂಗ ಮಾಲಿಕೆ - 14


"ರಂಗ ಜೀವಾಳ " ಬಳ್ಳಾರಿಯ 

 ಶಿವರುದ್ರಯ್ಯಸ್ವಾಮಿ



ಬಹುತೇಕವಾಗಿ ಯಾವುದೇ ರಂಗವಾಗಲಿ ಅಲ್ಲಿ ಬಹುಮುಖ್ಯವಾಗಿ ಮುಖ್ಯ ವಾಹಿನಿಗೆ ಕಾಣಸಿಗುವುದೇ ನಟವರ್ಗ ಮಾತ್ರ.ಆದರೆ ಅಭಿನೇತೃಗಳ ಅಭಿನಯಕ್ಕೆ ಮೆರಗು ನೀಡುವ ಅನೇಕ ತಂತ್ರಜ್ಞರು ಬೆಳಕಿಗೆ ಬಾರದೇ ಮರೆಯಾಗುವರು.ಆ ನಿಟ್ಟಿನಲ್ಲಿ ಬಳ್ಳಾರಿ ಜಿಲ್ಲೆಯಾದ್ಯಂತ ಪ್ರದರ್ಶನ ಗೊಳ್ಳುತ್ತಿದ್ದ ಅದೆಷ್ಟೋ ಬಯಲಾಟಗಳಿಗೆ ಆಹಾರ್ಯಾದಿ ಪರಿಕರಗಳನ್ನು ಒದಗಿಸುತ್ತಿದ್ದ ಮತ್ತು ಪ್ರಸ್ತುತ ರಂಗಭೂಮಿಯೊಡನೆ ಸೆಣಸಾಡುತ್ತ ಎಲೆ ಮರೆ ಕಾಯಿಯಂತಿರುವ " ಬಳ್ಳಾರಿಯ ಹಣ್ಣು ಕಾಯಿ ಶಿವರುದ್ರಯ್ಯ" ನವರು ಒಬ್ಬರು.

ಇವರು ಬಳ್ಳಾರಿಯ ಎತ್ತಿನಬೂದಿಹಾಳ್ ಗ್ರಾಮದ ರುದ್ರಯ್ಯ ಮತ್ತು ಗೌರಮ್ಮ ಎಂಬುವವರ ಮಗನಾಗಿ ಕ್ರಿ.ಶ.1933 ರಲ್ಲಿ ಜನಿಸಿದರು. ಇವರ ತಾತ ವೀರಭದ್ರಯ್ಯ ಮತ್ತು ತಂದೆಯಿಂದಲೇ ಈ ರಂಗಕಾರ್ಯಕ್ಕೆ ಮುಂದಡಿಯಿಟ್ಟರು.ನಗರದ ಮಧ್ಯದಲ್ಲಿ ಇರುವ ಸಾಲೇಶ್ವರ ಗುಡಿಯ ಹತ್ತಿರವಿದ್ದ ಇವರ ಮನೆಗೆ ಬಂಡಿಗಳನ್ನು ಕಟ್ಟಿಕೊಂಡು ಬಂದು ಬಯಲಾಟ ಪರಿಕರಗಳನ್ನು ಕೊಂಡೊಯ್ಯುತ್ತಿದ್ದ ದೃಶ್ಯಗಳೇ ಇವರ ರಂಗಕೃತಿಗೆ ಸ್ಫೂರ್ತಿಯಾಗಿವೆ. 

ಹೀರದ ಸೂಗಮ್ಮ ಮತ್ತು ಶೆಟ್ರ ಗುರುಶಾಂತಪ್ಪ ಶಾಲೆಗಳಲ್ಲಿ ತಮ್ಮ ಪ್ರಾಥಮಿಕ ,ಮಾಧ್ಯಮಿಕ ಶಿಕ್ಷಣ ಅಧ್ಯಯನ ಮಾಡುತ್ತಲೇ ತಂದೆಯಿಂದಲೇ ನಾಟಕದ ಪರಿಕರಗಳನ್ನು ಮಾಡುವ ಕಲೆಯನ್ನು ಕರಗತ ಮಾಡಿಕೊಂಡರು.ಇದರ ಜೊತೆ ಜೊತೆಯಲ್ಲಿ ಸರಳ,ಸುಂದರ,ಅಲ್ಪ ಕಾಲ ಮತ್ತು ಹಣದಲ್ಲಿ ತಯಾರಿಸುವ ಕಲೆಯಲ್ಲಿ ಕ್ರಮೇಣವಾಗಿ ಸ್ವಸಿದ್ಧಿಯನ್ನು ಗಳಿಸಿದರು.

ಒಮ್ಮೆ ಹೈದರಾಬಾದ್ ನಿಂದ ಅಧುನಿಕ ಹವ್ಯಾಸಿ ನಾಟಕಗಳಿಗೆ ಬಳಕೆಯಾಗುವ ಸರಳ ರೀತಿಯ ಕಿರೀಟವನ್ನು ತಂದು ನಂತರದ ದಿನದಲ್ಲಿ ತಮ್ಮಲ್ಲಿದ್ದ ಪ್ಲಾಸ್ಟಿಕ್ ಬಟ್ಟಲು ,ರಟ್ಟು ,ಮುತ್ತನ ಮಣಿ,ಬಣ್ಣದ ಕಾಗದಗಳಿಂದಲೇ ಅದೇ ರೀತಿ ಹೋಲುವ ಕಿರೀಟವನ್ನು ಹಾಗೂ ಯಾವುದಾದರೂ ನವೀನ ರೀತಿಯ ರಂಗ ಪರಿಕರ ಕಂಡರೆ ಅದನ್ನೊಲುವ ಪರಿಕರವನ್ನು ಸ್ಥಳೀಯ ವಸ್ತು ಬಳಸಿ ತಯಾರು ಮಾಡುವ ಚಾಕಚಕ್ಯತೆಯನ್ನು ಹೊಂದಿದ್ದಾರೆ. ಪ್ಲಾಸ್ಟಿಕ್ ವಸ್ತುಗಳು ಬಳಕೆ ಇಲ್ಲದಿದ್ದ ಕಾಲದಲ್ಲಿ ಸರಳ ಅಭಿನಯಕ್ಕೆ ಒದಗುವ ವಸ್ತುಗಳ ತಯಾರಿಗಾಗಿ ಮಣ್ಣಿನ ಅಚ್ಚನ್ನು ನಿರ್ಮಿಸಿ ಅದಕ್ಕೆ ಪೇಪರ್ ಪಲ್ಪ್ ಮೂಲಕ ಕೊಡ,ಬಟ್ಟಲು,ಬುಟ್ಟಿ ಇನ್ನಿತರೆ ವಸ್ತುಗಳ ತಯಾರಿಸುವುದನ್ನು ಸ್ವಕಲಿತರು.

ಮುತ್ತಿನ ಮಣಿಗಳಿರದ ಕಾಲದಲ್ಲಿ ಜೀರಂಗಿ ಮತ್ತಿತರೆ ಕೀಟಗಳ ಹೊಳೆಯುವ ಕೆಂಪು,ಹಸಿರು ರೆಕ್ಕೆಗಳನ್ನು ಮತ್ತು ಒಡೆದ ಕನ್ನಡಿ ಚೂರು,ಬಳೆಗಳನ್ನು ಹುಣಸೆ ಮತ್ತು ಕಟ್ಟಿಗೆ ಪುಡಿಯ ಮಿಶ್ರಣದ ಅಂಟಿನ ಮೂಲಕ ಪರಿಕರಗಳ ಅಲಂಕಾರ ಮಾಡಲಾಗುತ್ತಿತ್ತು.

ಅಲ್ಲದೆ ಹಿಂದಿನ ಕಲಾವಿದರ ಅಭಿನಯಕ್ಕನುಗುಣವಾಗಿ ಮಣಭಾರ ತೂಗುವ ಪರಿಕರಗಳನ್ನು ಮಾಡಿದ ಇವರು ಇಂದಿನ ಕಲಾವಿದರ ಅಭಿನಯಕ್ಕನುಗುಣವಾಗಿ ಕೆ.ಜಿ ಭಾರ ತೂಗುವ ಪರಿಕರಗಳನ್ನು ತಯಾರಿಸುವ ಕಲೆಯನ್ನು ಕಾಲಕಾಲಕ್ಕೆ ನವೀನಗೊಳಿಸಿಕೊಂಡರು.

ತೂಗು ಪೆಟ್ರೋಮ್ಯಾಕ್ಸ್ ದೀಪದ  ಬೆಳಕಿನ ಹಳ್ಳಿ ನಾಟಕಗಳಿಗೆ  ಮೊದಲು ಈ ಪರಿಕರಗಳನ್ನು ಕೇವಲ 60-100 ರೂ ಗೆ ನೀಡುತ್ತಿದ್ದರು.ಆದರೆ ವಿದ್ಯುತ್ ಕಂಡ ನಂತರ ಹಳ್ಳಿ ಹಳ್ಳಿಗಳ ಬಯಲಾಟದಲ್ಲಿ ಬಳ್ಳಾರಿ ಲೈಟಿಂಗ್ ಹಸೇನ್ ಸಾಬ್ ಮತ್ತು ಎರ್ರೆಪ್ಪರ ಬೆಳಕಿನ ವಿನ್ಯಾಸದೊಂದಿಗೆ ಹೊಳೆಯುವ ಶಿವರುದ್ರಯ್ಯನವರ ರಂಗ ಪರಿಕರಗಳಿಗೆ ಎಲ್ಲಿಲ್ಲದ ಬೇಡಿಕೆ ಮತ್ತು ಬೆಲೆ ಇಮ್ಮಡಿಯಾದವು.

ಸುಮಾರು 130 ವರ್ಷ ತಮ್ಮ ತಾತನವರ ಕಾಲದಿಂದಲೂ ಬಳ್ಳಾರಿಯ ಬಯಲಾಟಗಳಿಗೆ  ರಂಗ ಪರಿಕರ,ಸಂಗೀತ ವಾದ್ಯಗಳು,ವೇಷಭೂಷಣ,ಪ್ರಸಾಧನ,ಸೀನರಿಯ ವ್ಯವಸ್ಥೆ ಕಲ್ಪಿಸುತ್ತ ರಂಗ ಕಾರ್ಯವನ್ನು ಮಾಡುತ್ತಾ ಬಂದಿದ್ದಾರೆ. ಇದರ ನಡುವೆ ಅದೆಷ್ಟೋ ರಂಗದ್ರೋಹಿಗಳ ಮೂಲಕ ಬಾಡಿಗೆಗೆ ನೀಡಿದ ವಸ್ತುಗಳನ್ನು ಮತ್ತು ಬಾಡಿಗೆ ಹಣ ನೀಡದೆ ಮೋಸ ಹೋದ ಅನೇಕ ಪ್ರಸಂಗಗಳಿಗೆ ಕುಗ್ಗದೇ ಹಿಗ್ಗಿ ನಿಂತ ಗಟ್ಟಿಗರು.

70 ವರ್ಷಗಳ ಕಾಲ ಮಡದಿ ಮಹಾದೇವಮ್ಮನವರೊಡಗೂಡಿ ಮಕ್ಕಳು - ಮಾಮ್ಮಕ್ಕಳೊಂದಿಗೆ ಮಾಡಿದ ಸುಧೀರ್ಘ ರಂಗ ಕಾಯಕವ ಗುರುತಿಸಿದ ಸರ್ಕಾರ 2011 ರಲ್ಲಿ ನಾಟಕ ಅಕಾಡೆಮಿಯ ಗೌರವ ಧನ ಪ್ರಶಸ್ತಿ,ರಂಗ ಜಂಗಮ ಗೌರವ ಪುರಸ್ಕಾರ, ಹಲವು ಸಂಘಸಂಸ್ಥೆಗಳಿಂದ ಸನ್ಮಾನ ಹಾಗೂ ಹಂಪಿ ಕನ್ನಡ ವಿವಿಯ ಶಿಲ್ಪ ಮತ್ತು ವರ್ಣಚಿತ್ರಕಲೆಗಳ ಅಧ್ಯಯನ ವಿಭಾಗದ  ಬದಾಮಿ ಶಾಖಾ ಯೋಜಕಿಯಾದ ಮಂಜುಳಾ ಬಾಯಿ.ಎಲ್.ಟಿ ಯವರು ಡಾ.ಎಸ್.ಸಿ.ಪಾಟೀಲ್ ರ ಮಾರ್ಗದರ್ಶನದಲ್ಲಿ  "ಬಯಲಾಟದ ವಸ್ತುಗಳನ್ನು ತಯಾರಿಸುವ ಕಲಾವಿದ ಬಳ್ಳಾರಿಯ ಹಣ್ಣು ಕಾಯಿ ಶಿವರುದ್ರಯ್ಯ ಸ್ವಾಮಿ" ಎಂಬ ಕಿರು ಯೋಜನಾ ಗ್ರಂಥ ಬರೆದು ಗೌರವಿಸಿದ್ದಾರೆ.ಇದಲ್ಲದೆ ಮೊಮ್ಮಕ್ಕಳಾದ ನಿವೇದಿತಾ,ನಿಶ್ಚಿತ ,ಓಂಕಾರ,ಪರ್ಣಿಕಾರಲ್ಲಿಯೂ ರಂಗಾಸಕ್ತಿಯನ್ನು ತುಂಬಿದ್ದಾರೆ.



ಲೇಖನ

ಆರ್.ಪಿ.ಮಂಜುನಾಥ್.ಬಿ.ಜಿ.ದಿನ್ನೆ

ಸಾಹಿತಿ ಮತ್ತು ಕಾರ್ಯದರ್ಶಿ

ಕಾರಂತ ರಂಗಲೋಕ (ರಿ)

ಮೊ-9379857775

Comments

Popular posts from this blog

ರಂಗ ಮಾಲಿಕೆ -೩೭ ನಡೆದಾಡುತ್ತಿದ್ದ ರಕ್ತರಾತ್ರಿ 'ನಾಡಂಗ ಬಸವರಾಜ'

ರಂಗ ಮಾಲಿಕೆ -೨೧ ಆಂಧ್ರ ನಾಟಕ ಪಿತಾಮಹ ಧರ್ಮಾವರಂ ರಾಮಕೃಷ್ಣಮಾಚಾರ್ಯರು

ರಂಗ ಮಾಲಿಕೆ -೨೭ ಅದಮ್ಯ ಚೇತನದ ರಂಗಮಣಿ 'ಸೋಗಿ ನಾಗರತ್ನಮ್ಮ'.