ರಂಗ ಮಾಲಿಕೆ-೧೨- ಎಲಿವಾಳ ಸಿದ್ದಯ್ಯಸ್ವಾಮಿ
ಬಣ್ಣದ ಬದುಕು..!
ರಂಗ ಮಾಲಿಕೆ-೧೨
ಕಲಿಯುಗದ ಅಶ್ವತ್ಥಾಮ ' ಎಲಿವಾಳ ಸಿದ್ದಯ್ಯಸ್ವಾಮಿ.
ರಂಗಭೂಮಿಯಲ್ಲಿ ರಾಜನಂತೆ ಮೆರೆದು ಕೊನೆಯಲ್ಲಿ ತುತ್ತು ಕೂಳಿಗೂ ಗತಿಯಿಲ್ಲದೆ ಹಾದಿಯಲ್ಲಿ ಹತರಾದ ಅನೇಕ ಕಲಾವಿದರನ್ನು ಕಾಣಬಹುದು. ಆ ನಿಟ್ಟಿನಲ್ಲಿ ಹೆಸರಿಸಬಹುದಾದ ಮತ್ತು ಬಳ್ಳಾರಿ ವೃತ್ತಿ ರಂಗಭೂಮಿ ಇತಿಹಾಸದಲ್ಲಿ ಹೊಳೆಯುವ ಅಗಸ್ತ್ಯ ನಕ್ಷತ್ರ ಎಂದು ಖ್ಯಾತರಾಗಿದ್ದ ಎಲಿವಾಳ ಸಿದ್ದಯ್ಯಸ್ವಾಮಿಯವರು ಒಬ್ಬರು.
ಇವರು ಡಾ.ರಾಜಕುಮಾರ್ ರ ಸಮಕಾಲೀನರಾಗಿದ್ದೂ ಮತ್ತು ಅವರಿಗಿಂತ ಉನ್ನತ ಮಟ್ಟದ ಕಲಾ ಪ್ರೌಢಿಮೆಯನ್ನು ಹೊಂದಿದ್ದ ಸರಳ ಜೀವಿಯಾಗಿದ್ದರು.
ಇವರು ಕ್ರಿ.ಶ.1924 ರಲ್ಲಿ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಯಲಿವಾಳ ಗ್ರಾಮದ ಚೆನ್ನಯ್ಯ ಮತ್ತು ಅಡಿವೆಮ್ಮ ಎಂಬ ದಂಪತಿಗಳ ಮಗನಾಗಿ ಜನಿಸಿದರು.ಅಲ್ಲದೆ ಸ್ವತಃ ಹಾರ್ಮೋನಿಯಂ ಮತ್ತು ಪಿಟೀಲು ವಾದಕರಾಗಿದ್ದ ತಂದೆಯಿಂದಲೇ ಕಲಾ ನೈಪುಣ್ಯತೆ ಬಳುವಳಿಯಾಗಿ ಇವರಿಗೆ ಬಂದಿತ್ತು. ಅಂತೆಯೇ ಕೇವಲ ನಾಲ್ಕನೇ ತರಗತಿಗೆ ಶಿಕ್ಷಣಕ್ಕೆ ವಿದಾಯ ಹೇಳಿ ದೇವಗಿರಿಯ ಚಂದ್ರಶೇಖರಯ್ಯ ಸ್ವಾಮಿ ಅವರ ಬಳಿಗೆ ಸಂಗೀತ ವಿದ್ಯಾಭ್ಯಾಸಕ್ಕೆಂದು ತೆರಳಿದರು. ಹೀಗೆ ಒಮ್ಮೆ ತಮ್ಮ ಊರಿನಲ್ಲಿ ಭಕ್ತ ಮಾರ್ಕಂಡಯ್ಯ ಎಂಬ ನಾಟಕ ಹಮ್ಮಿಕೊಳ್ಳಲಾಗಿತ್ತು ಆದರೆ ಕೆಲವೇ ದಿನಗಳಲ್ಲಿ ಮಾರ್ಕಂಡೇಯ ಪಾತ್ರದಾರಿ ಅಚಾನಕ್ಕಾಗಿ ಕೈಕೊಟ್ಟಿದ್ದರಿಂದ ಆ ಪಾತ್ರಕ್ಕೆ ಸಿದ್ದ ತಯಾರು ಮಾಡಲಾಗಿತ್ತು ಅಂತೆಯೇ ನಾಟಕದ ದಿನ ಎಲ್ಲರ ನಂಬಿಕೆ, ವಿಶ್ವಾಸ ,ಪ್ರೀತಿ ಎಲ್ಲವನ್ನು ಗೆದ್ದು ಜನರ ಮನಸ್ಸನ್ನು ಸೆಳೆದರು. ಸಂಗೀತದ ಅಲೆಯಲ್ಲಿ ತೇಲುತ್ತಿದ್ದ ಸಿದ್ದಯ್ಯರವರಿಗೆ ನಟನ ಸಾಗರ ಕಾಣಲಾರಂಭಿಸಿತು .ಈಗಿರುವಾಗ ಮತ್ತಿಗಟ್ಟಿ ಗ್ರಾಮದಲ್ಲಿ ಉಳವಿ ಚನ್ನಬಸವೇಶ್ವರ ಜಾತ್ರೆಯ ಪ್ರಯುಕ್ತ ಜಮಖಂಡಿ ನಾಟಕ ಕಂಪನಿ ಕೀಚಕ ವಧೆ ನಾಟಕವನ್ನು ಹಮ್ಮಿಕೊಂಡಿತ್ತು.ಈ ನಾಟಕ ದಿಂದಾಗಿ ಪ್ರಭಾವಿತರಾಗಿ ಮುಂದೆ ಅದೇ ಕಂಪನಿ ಸೇರಿ ಸಂಪೂರ್ಣ ರಾಮಾಯಣ ಎಂಬ ನಾಟಕದಲ್ಲಿ ಸೀತೆಯ ಪಾತ್ರಕ್ಕೆ ಬಣ್ಣ ಹಚ್ಚುವ ಮೂಲಕ ಅಧಿಕೃತವಾಗಿ ರಂಗಭೂಮಿಗೆ ಕಾಲಿಟ್ಟರು ಮುಂದೆ ತಮ್ಮ ಅಗಾಧ ಆಂಗೀಕ-ವಾಚಿಕ ಅಭಿನಯದ ಮೂಲಕ ಕನ್ನಡ ರಂಗಭೂಮಿಯ ಕಲಾ ಪ್ರೇಕ್ಷಕರನ್ನು ರಂಜಿಸಿ ಶ್ರೇಷ್ಠ ನಟರು ಎನಿಸುತ್ತಾರೆ.
ಕಾಲ ಉರುಳಿದಂತೆ ಕೆಲವು ವರ್ಷಗಳ ನಂತರ ಜಮಖಂಡಿ ಕಂಪನಿಯಿಂದ ಗೋಕಾಕ್ ನಾಟಕ ಕಂಪನಿಗೆ ಸೇರಿ ೧೯೪೦-೫೦ರವರಗೆ ಸುಮಾರು ೮-೧೦ ವರ್ಷಗಳ ಕಾಲ ರಂಗ ಕಾಯಕವನ್ನು ಅಲ್ಲಿಯೇ ಮಾಡಿದರು.ಈ ಸಮಯದಲ್ಲಿ 'ಚಿತ್ರಾಂಗದ' ನಾಟಕದ 'ಉಲೂಚಿ', 'ವರಣಾ ವಾಶಾ' ನಾಟಕದ 'ಗುರುಸಿದ್ಧ', 'ರಕ್ತರಾತ್ರಿ' ನಾಟಕದ ' ಕುರುಕ್ಷೇತ್ರ', 'ಕುರುಕ್ಷೇತ್ರ' ನಾಟಕದ 'ಕೃಷ್ಣ - ದುಶ್ಯಾಸನ' ,'ಮಾತಾಂಗ ಕನ್ಯಾ' ನಾಟಕದ 'ಕಿಶೋರ' ಹಾಗೂ 'ದ್ರೌಪದಿ' ನಾಟಕದ 'ದುಶ್ಯಾಸನ'ನಾಗಿ ಹೀಗೆ ಹಲವು ವೈವಿಧ್ಯಮಯ ನಾಟಕಗಳಲ್ಲಿ ವಿಭಿನ್ನ ಪಾತ್ರಗಳನ್ನು ನಿರ್ವಹಿಸುವ ಮೂಲಕ ಗೋಕಾಕ್ ನಾಟಕ ಕಂಪನಿಯ ಶ್ರೇಷ್ಠ ನಟರ ಸಾಲಿನಲ್ಲಿ ಶ್ರೇಷ್ಠ ನಟರೆನಿಸಿದ್ದರು.
ಇವರನ್ನು ಬಳ್ಳಾರಿ ಜಿಲ್ಲೆಯ ರಂಗಭೂಮಿರಲ್ಲಿ ಗುರುತಿಸಲು ಪ್ರಮುಖ ಕಾರಣ 'ಕರ್ನಾಟಕದ ಸೇಕ್ಸ್ ಪಿಯರ್' ಕಂದಗಲ್ ಹನುಮಂತರಾಯರ ರಕ್ತರಾತ್ರಿ ನಾಟಕ.ಇದು ಸಿದ್ದಯ್ಯರಿಗೆ ಬಹು ಜನಪ್ರಿಯತೆಯನ್ನು ತಂದುಕೊಟ್ಟಿತ್ತು.ಅಲ್ಲದೇ 'ಕಂದಗಲ್ಲರು ಸಿದ್ದಯ್ಯರಿಗೆಂದೆ ರಕ್ತರಾತ್ರಿ ನಾಟಕ ಬರೆದಿದ್ದು' ಎನ್ನುವ ಬಹುತೇಕ ಪ್ರೇಕ್ಷಕರ ಮಾತು ಅಕ್ಷರಶಃ ಸತ್ಯ. ಏಕೆಂದರೆ ರಕ್ತರಾತ್ರಿ ನಾಟಕದ ಅಶ್ವತ್ಥಾಮ ಎಂದಕೂಡಲೇ ಬಹುತೇಕರಿಗೆ ನೆನಪಾಗುವುದು ಕಂದಗಲ್ ಹನುಮಂತರಾಯರಿಂದಲೇ 'ಕಲಿಯುಗದ ಅಶ್ವತ್ಥಾಮ' ಎಂದು ಬಿರುದು ಪಡೆದ ಎಲಿವಾಳ ಸಿದ್ದಯ್ಯನವರು. ಅಷ್ಟರ ಮಟ್ಟಿಗೆ ಆ ಪಾತ್ರವನ್ನು ಆವರಿಸಿಕೊಂಡಿದ್ದರು. ಅದಕ್ಕೆ ನಿದರ್ಶನವೆಂದರೆ ಉಪಪಾಂಡವರ ರುಂಡಗಳನ್ನು ಹಿಡಿಡು ವಿಕಟಾಟ್ಟಹಾಸದ ನಗೆಯ ಮೂಲಕ ಪ್ರೇಕ್ಷಕ ಗಣಕ್ಕೆ ಬೆನ್ನು ತೋರಿ ಕಡುಕೋಪ,ರೌದ್ರಮಯವಾಗಿ ಪ್ರವೇಶವಾಗುವ ಕರಾರುವಕ್ಕಾದ ನಟನೆಯ ಮೂಲಕ ಎಲ್ಲರನ್ನೂ ನಿಬ್ಬೆರಗಾಗಿಸುವ ಚಾಕಚಕ್ಯತೆಯನ್ನು ಹೊಂದಿದ್ದರು. ಹೀಗೆ ಇವರ ಕೀರ್ತಿ ನಾಡಿನಾದ್ಯಂತ ಪಸರಿಸಿದಾಗ ಒಮ್ಮೆ ಬಳ್ಳಾರಿ ಕ್ಯಾಂಪಿನಲ್ಲಿ ಏರ್ಪಡಿಸಿದ್ದ ಬಸವಣ್ಣೆಪ್ಪ ಹೊಸಮನಿಯವರ ನಿರ್ದೇಶನದ ರಕ್ತರಾತ್ರಿ ನಾಟಕವನ್ನು ನೋಡಲೆಂದು ಬಂದ ಗುಬ್ಬಿ ವೀರಣ್ಣ ಮತ್ತು ಕೆ.ಹಿರಣ್ಣಯ್ಯರು ಇವರ ಅಭಿನಯಕ್ಕೆ ಮಾರುಹೋಗಿ ತಮ್ಮ ಕಂಪನಿಗೆ ಕರೆದೊಯ್ದರು.
ಇವರು ನೇರ ಮತ್ತು ನಿಷ್ಟುರ ನಡೆಯ ರಂಗ ನಟರು ಅಂತೆಯೇ ಯಾರೇ ಇರಲಿ , ಜಾಗ ಯಾವುದೇ ಇರಲಿ ಯಾವುದನ್ನೂ ಲೆಕ್ಕಿಸದೆ ಕಟುವಾಗಿ ಟೀಕಿಸುವ ಕಠೋರ ಮನಸ್ಸಿನವರು. ಅಂತೆಯೇ ಒಮ್ಮೆ ತವಸಿಗೌಡರ ಕಂಪನಿಯಲ್ಲಿ ಸಂಪತ್ತಿಗೆ ಸವಾಲ್ ಖ್ಯಾತಿಯ ಪಿ.ಬಿ.ದುತ್ತರಗಿ ರಚಿಸಿ,ನಿರ್ದೇಶಿಸಿದ 'ಶ್ರೀ ವಿಜಯ ಮಹಾಂತೇಶ ಮಹಾತ್ಮೆ' ನಾಟಕದಲ್ಲಿ ' ಧರ್ಮಣ್ಣ' ಪಾತ್ರದ ಪ್ರವೇಶದ ಕುರಿತಾಗಿ ಮಾತಿಲ್ಲದೇ ವೇದಿಕೆ ಬಂದರೆ ಹೆಚ್ಚು ಆಕರ್ಷಕ ಎಂಬ ಪಾತ್ರಧಾರಿ ಸಿದ್ದಯ್ಯರ ವಾದ ಆದರೆ ಅದೆಲ್ಲಾ ಅನಾಗತ್ಯ ಎಂಬುದು ನಿರ್ದೇಶಕರ ಒತ್ತಾಯ ಇವರಿರ್ವರಿಗೂ ವಾಗ್ವಾದ ನಡೆದು ಕೊನೆಗೆ ಪಣವಾಗಿ ಪರಿಣಮಿಸಿ ,ಪಾತ್ರಧಾರಿ ಯಾವುದೇ ಮಾತಿಲ್ಲದೇ ವಿಶಿಷ್ಟ ರೀತಿಯಲ್ಲಿ ವೇದಿಕೆಗೆ ಬಂದು ಪ್ರೇಕ್ಷಕರ ಸಿಳ್ಳೆ,ಚಪ್ಪಾಳೆ ಗಿಟ್ಟಿಸಿಕೊಂಡು ನಿರ್ದೇಶಕರಿಗೆ ಮುಖಭಂಗ ಮಾಡಿದ್ದರು. ಅದಲ್ಲದೇ ದುತ್ತರಗಿಯವರೇ ಸ್ವತಃ ಸಂದರ್ಶನವೊಂದರಲ್ಲಿ ಸಿದ್ದಯ್ಯರ ಕುರಿತಾಗಿ ಅವರಿಂದ ' ಅಂದು ಸಿದ್ದಯ್ಯರಿಂದ ಸೋಲುಂಡಿದ್ದರೂ,ಮುಂದೆ ಅವರನ್ನೇ ಅನುಸರಿಸಿ ರಂಗಭೂಮಿಯಲ್ಲಿ ವಿಜಯದುಂದುಭಿ ಮೊಳಗಿಸಿದೆ 'ಎಂದಿದ್ದಾರೆ.
ಕಾಲಕಳೆದಂತೆ ಇದೇ ಅಶ್ವತ್ಥಾಮ ಪಾತ್ರದ ಮೂಲಕ ಗುರುತಿಸಿಕೊಂಡ ಸಿದ್ದಯ್ಯರು ಅಂದಿನ ಮದ್ರಾಸಿಗೆ ತೆರಳಿ ಹುಣಸೂರು ಕೃಷ್ಣಮೂರ್ತಿ ನಿರ್ದೇಶನದಲ್ಲಿ ೧೯೫೮ ರಲ್ಲಿ ಬಿಡುಗಡೆಯಾದ 'ಶ್ರೀ ಕೃಷ್ಣ ಗಾರುಡಿ' ಚಲನಚಿತ್ರದಲ್ಲಿ ಕೃಷ್ಣನಾಗಿ ಅಮೋಘ ಅಭಿನಯದ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮ ಛಾಪನ್ನು ಮೂಡಿಸಿದರು. ಡಾ.ರಾಜ್ ರ ಮಟ್ಟಕ್ಕೆ ಬೆಳೆಯಬೇಕಾದ ಅಗಾಧ ಪ್ರತಿಭೆಯ ಪ್ರಭೆ ಹಲವು ಹಿರಿಯ ನಟರ ಕುತಂತ್ರದಿಂದ ಬೆಳಗಿ ಪ್ರಜ್ವಲಿಸುವ ಮುನ್ನವೇ ನಂದಿತು. ಆದರೆ ಯಾವುದಕ್ಕೂ ಬಗ್ಗದ ಎಲಿವಾಳರು ಪುನಃ ಕುರುಗೋಡು,ಕುಡುದರಹಾಳು, ಗೆಣಿಕಿಹಾಳ್ ಗ್ರಾಮಗಳಲ್ಲಿ ಸುತ್ತಾಡಿ ಹಲವು ಯುವಕರನ್ನು ಸೇರಿಸಿ ಹವ್ಯಾಸಿ ರಂಗತಂಡ ಕಟ್ಟಿ ಬಳ್ಳಾರಿಯಾದ್ಯಂತ ರಕ್ತರಾತ್ರಿ ನಾಟಕವನ್ನು ಇಂದಿಗೂ ಜೀವಂತವಾಗಿಸಿದರು.
ಸಿದ್ದಯ್ಯರ ಕಲಾಸೇವೆಯನ್ನು ಗುರುತಿಸಿದ ಕಂದಗಲ್ಲರೇ ಇವರಿಗೆ 'ಅಭಿನಯ ಕೇಸರಿ' ಬಿರುದು, ಪಂ.ಪುಟ್ಟರಾಜ ಗವಾಯಿಗಳು ಇವರ ನಟನೆಗೆ ಮಾರುಹೋಗಿ ' ನಟರತ್ನ' ಬಿರುದು ಹಾಗೂ ಕರ್ನಾಟಕ ಸರ್ಕಾರ ಇವರಿಗೆ ೧೯೮೮ರಲ್ಲಿ 'ಕರ್ನಾಟಕ ನಾಟಕ ಅಕಾಡೆಮಿ' ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಆದರೆ ಎಷ್ಟೇ ಬಿರುದು ಸನ್ಮಾಗಳಿದ್ದರೂ ತಮ್ಮ ಇಳಿಯ ವಯಸ್ಸಿನಲ್ಲಿ ಹೊಟ್ಟೆ ತುಂಬಿಸಲು ಸಹಾಯವಾಗಲಿಲ್ಲ.ಮಡದಿ - ಮಕ್ಕಳಿಂದ ದೂರವಾಗಿ ಅನೇಕ ಸಂಕಷ್ಟಗಳನ್ನು ಅನುಭವಿಸಿದರು.ಆಗ ಇವರ ಕಟ್ಟ ಅಭಿಮಾನಿಯಾದ ರಂಗಕರ್ಮಿ ಡಾ.ಶಿವಕುಮಾರ್ ತಾತನವರು ಇವರನ್ನು ತಮ್ಮ ಕುಡುದರಹಾಳ್ ಗೆ ಕರೆತಂದು ತಮ್ಮ ಶಕ್ತಿಯನುಸಾರ ಸಲುಹಿದರು.ಆದರೆ ನಾಟಕ /ಪುರಾಣ ಪ್ರವಚನ ನಿಮಿತ್ತವಾಗಿ ಪರಸ್ಥಳಕ್ಕೆ ತೆರಳಿದಾಗ ಗಂಟಲಿನ ಕ್ಯಾನ್ಸರ್ ನಿಂದ ಬಳ್ಳಾರಿಯ ಸೇಂಟ್ ಮೇರಿಸ್ ಆಸ್ಪತ್ರೆಗೆ ಸೇರಿ ಅಲ್ಲಿಯೇ ಅನಾಥವಾಗಿ ೦೨.೦೧.೧೯೯೦ ರಂದು ಹತರಾದದ್ದು ನೆನೆದರೆ ತುಂಬಾ ಖೇಧಕರ ಎನಿಸುವುದು.
ಲೇಖನ
ಆರ್.ಪಿ.ಮಂಜುನಾಥ್. ಬಿ.ಜಿ.ದಿನ್ನೆ.
ಸಾಹಿತಿ/ಕಾರ್ಯದರ್ಶಿ
ಕಾರಂತ ರಂಗಲೋಕ(ರಿ)
Mob-9379857775
manjuamazing7@gmail.com.


Comments
Post a Comment