ರಂಗ ಮಾಲಿಕೆ-13- ಸಿರಿಗೇರಿ ನಾಗನಗೌಡರು.









ಬಣ್ಣದ ಬದುಕು
ರಂಗ ಮಾಲಿಕೆ- 13

ರಂಗಭೂಮಿಯ ಹಾರ್ಮೋನಿಯಂ ಚತುರ ' ಸಿರಿಗೇರಿ ನಾಗನಗೌಡರು'

ಬಳ್ಳಾರಿ ರಂಗಭೂಮಿಗಾಗಿ ತಮ್ಮ ಜೀವಮಾನ ಸಾಧನೆಗೈದ ಅನೇಕ ರಂಗ ದಿಗ್ಗಜರನ್ನು ನಾವು-ನೀವೆಲ್ಲ ಮರೆತಿದ್ದೇವೆ.ಅಂತಹ ಮರೆತು ಹೋದ ಮಹನೀಯರಲ್ಲಿ ಒಬ್ಬರಾದ ರಂಗ ದಿಗ್ಗಜ,ಉಭಯ ಕಲಾ ವಿಶಾರದ ಸಿರಿಗೇರಿ ನಾಗನಗೌಡರು.

ಇವರು ಬಳ್ಳಾರಿ ಜಿಲ್ಲಾ ಸಿರುಗುಪ್ಪ ತಾಲ್ಲೂಕಿನ ಸಿರಿಗೇರಿ ಗ್ರಾಮದಲ್ಲಿ 1940ರಲ್ಲಿ ತಂದೆ ಪಂಪನಗೌಡ ತಾಯಿ ಲಿಂಗಮ್ಮ ರ ಮಗನಾಗಿ ಜನಿಸಿದರು. ತಂದೆಯು ಸಹ ಹಾರ್ಮೋನಿಯಂ ಮಾಸ್ತರರಾಗಿದ್ದರಿಂದಲೇ ಗೌಡರಿಗೆ ಬಳುವಳಿಯಾಗಿ ಕಲಾಸಕ್ತಿ ಬಂದಂತಿದೆ.ಅಂತೆಯೇ ಗೌಡರು ತಮ್ಮ ಊರಿನಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿ 12ನೇ ವಯಸ್ಸಿನಲ್ಲಿ ಗದಗಿನ ಶ್ರೀ ವೀರೇಶ್ವರ ಪುಣ್ಯಾಶ್ರಮ ವನ್ನು ಸೇರಿ ಡಾಕ್ಟರ್ ಪಂಡಿತ್ ಪುಟ್ಟರಾಜ ಗವಾಯಿಗಳ ಶಿಷ್ಯರಾಗಿ ಸಂಗೀತ ಮತ್ತು ಹಾರ್ಮೋನಿಯಂ ಶಿಕ್ಷಣವನ್ನು ಪಡೆದರು. ಅಲ್ಲದೆ ಅತಿ ಚಿಕ್ಕ ವಯಸ್ಸಿನಲ್ಲಿ ಗುರುಗಳ ಪ್ರೀತಿ ಮತ್ತು ಮಾರ್ಗದರ್ಶನದಿಂದ ಸಂಗೀತದಲ್ಲಿ ಅತ್ಯುನ್ನತ ಪರಿಣಿತಿಯನ್ನು ಪಡೆದು "ಸಂಗೀತ ವಿಶಾರದ" ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿ ಗಾನಯೋಗಿ ಪಂಚಾಕ್ಷರಿ ಗವಾಯಿಗಳಿಂದ ಕಟ್ಟಲ್ಪಟ್ಟ ಸಂಸ್ಥೆಗೆ ಕಳಶಪ್ರಾಯವಾಗಿ ಹೆಸರು ತಂದರು.
ಎರಡು ದಶಕಗಳಿಗಿಂತಲೂ ಹೆಚ್ಚು ಕಾಲ ಹಿಂದೂಸ್ತಾನಿ ಗಾಯನದಲ್ಲಿ ಹಾಗೂ ಹಾರ್ಮೋನಿಯಂ ವಾದನದಲ್ಲಿ ಕರತಲಮಲಕವಾಗಿ ತೊಡಗಿಸಿಕೊಂಡಿದ್ದಷ್ಟೇ ಅಲ್ಲದೇ, ಶ್ರೇಷ್ಠ ಆಕಾಶವಾಣಿ ಕಲಾವಿದರಾಗಿ, ಸಂಗೀತಗಾರರಾಗಿ, ರಂಗಭೂಮಿ ಕಲಾವಿದರಾಗಿ ಸಲ್ಲಿಸಿದ ಸೇವೆ ಅಜರಾಮರ ಎನಿಸಿದೆ. ಇವರು ಬಹುಮುಖ್ಯವಾಗಿ ಗುರುತಿಸಿಕೊಂಡ ಕ್ಷೇತ್ರ ಸಂಗೀತ ವಾದರೂ ಅಷ್ಟೇ ಪ್ರಾಶಸ್ತ್ಯವನ್ನು ರಂಗಭೂಮಿಗೂ ನೀಡಿದ್ದು ಸೋಜಿಗ ಎನಿಸುತ್ತದೆ. ಸಂಗೀತ ಕ್ಷೇತ್ರ ತಾನಾಗಿ ಬಯಸಿದ್ದು ಆದರೆ ರಂಗಭೂಮಿ ತಾನಾಗಿ ಒಲಿದಿದ್ದು  ಎಂಬುದು ಗೌಡರು ಸ್ವತಃ ಕಾರ್ಯಕ್ರಮ ಒಂದರಲ್ಲಿ ಹಂಚಿಕೊಂಡ ಅಂತರಾಳದ ಅನಿಸಿಕೆ. ಅದೆನೇ ಇರಲಿ ಸಿರಿಗೇರಿ ನಾಗನಗೌಡರು ಕೇವಲ ಸಿರಿಗೇರಿಗೇ ಸೀಮಿತರಾಗುತ್ತಾರೆಂದು ಬಹುತೇಕರ ಅಭಿಪ್ರಾಯವಾಗಿತ್ತು.ಆದರೆ ಕಾಲಕ್ರಮೇಣ ಅವರ ನೈಜ ಸಂಗೀತಾಸಕ್ತಿ ಮತ್ತು ರಂಗಾಸಕ್ತಿಯ ತನಿಗಾಳಿ ಅವರನ್ನು ರಾಜ್ಯಾದ್ಯಂತ ಪಸರಿಸುವಂತೆ ಮಾಡಿತ್ತೆಂದರೆ ತಪ್ಪಾಗಲಾರದು.
ಮತ್ತೊಂದು ಸಂಗತಿಯೆಂದರೆ ಇವರ ಸಮಕಾಲೀನರಾದ ಇವರಷ್ಟೇ ಪರಿಣಿತಿಯನ್ನು ಹೊಂದಿದ್ದ ಮಧುರೆ ಮರಿಸ್ವಾಮಿಯವರೊಂದಿಗೆ ಅನೇಕ ಬಾರಿ ಸಂಗೀತದ ಜುಗಲ್ಬಂದಿ ಯನ್ನು ನಡೆಸಿರುತ್ತಾರೆ. ಅಂತೆಯೇ ಈ ಇರ್ವರ ಜೋಡಿ ನಾನಾ ಕಡೆ ಪ್ರಸಿದ್ಧಿ ಪಡೆದು ದೆಹಲಿ, ಮದ್ರಾಸು,ಆಂಧ್ರ ಪ್ರದೇಶ,ಬೆಂಗಳೂರು, ಗುಲ್ಬರ್ಗ, ಮೈಸೂರು ದೇಶದ ಹಲವು ಕಡೆ ಸಂಗೀತ ಕಛೇರಿಗಳಲ್ಲಿ ಭಾಗವಹಿಸಿ ಜನ್ನ ಮನ್ನಣೆ ಪಡೆದು ಕಲಾ ಲೋಕದಲ್ಲಿ ತಮ್ಮದೇ ಆದ ವಿಶಿಷ್ಟ ಸಾಧನೆಯ ಮೂಲಕ " ಸಂಗೀತ ರತ್ನ "ಎಂಬ ಬಿರುದನ್ನು ಪಡೆದಿದ್ದರು.
 ಆ ಮೂಲಕ ಈಗಾಗಲೇ ಹಿಂದೂಸ್ತಾನಿ ಸಂಗೀತದಲ್ಲಿ ಪ್ರಸಿದ್ಧಿಯನ್ನು ಪಡೆದಿದ್ದ ಬಸವರಾಜ ರಾಜಗುರು, ಪ್ರಭುದೇವ ಸರ್ದಾರ್, ಲಕ್ಷ್ಮೀಶಂಕರ, ಅರ್ಜುನ್ ಷಾ ನಾಕೋಡ, ಸಿದ್ಧರಾಮ ಜಂಬಲದಿನ್ನಿ, ಪಂಚಾಕ್ಷರಿ ಮತ್ತಿಗಟ್ಟಿ ಇನ್ನು ಮುಂತಾದ ಕಲಾವಿದರಿಗೆ ಹಾರ್ಮೋನಿಯಂ ಸಾಥಿ ಯನ್ನು ನೀಡುವ ಮೂಲಕ ಪ್ರಸಿದ್ದರೊಳಗೆ ಇವರೂ ಒಬ್ಬರೆನಿಸಿದರು.
ಇವರ ಸಾಧನೆ ಕೇವಲ ಸಂಗೀತ ಕ್ಷೇತ್ರಕ್ಕೆ ಸೀಮಿತವಾಗದೆ.ರಂಗಭೂಮಿಯಲ್ಲಿ ನಟರಾಗಿ,ಗಾಯಕರಾಗಿ,ಸಂಗೀತ ನಿರ್ದೇಶಕರಾಗಿ ಸಲ್ಲಿಸಿದ ಸೇವೆ ಎಲ್ಲರೂ ನೆನೆಯುವಂತಹದ್ದು. ಇವರು ಮೊದಲ ಬಾರಿಗೆ ಗದುಗಿನ  ಶ್ರೀ ವೀರೇಶ್ವರ ಪುಣ್ಯಾಶ್ರಮದ ನಾಟಕ ಕಂಪನಿಯಿಂದ ಹುಬ್ಬಳ್ಳಿಯಲ್ಲಿ ಪ್ರದರ್ಶನಗೊಂಡ ' ಹೇಮರೆಡ್ಡಿ ಮಲ್ಲಮ್ಮ' ನಾಟಕದಲ್ಲಿ ಬಣ್ಣ ಹಚ್ಚುವ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ್ದರು.
ಆ ಮೂಲಕ ಹೇಮರೆಡ್ಡಿ ಮಲ್ಲಮ್ಮನ ನಾಟಕದಲ್ಲಿ ಹೇಮಣ್ಣ ನಾಗಿ ಅನೇಕ ಪ್ರದರ್ಶನಗಳನ್ನು ನೀಡಿ ಪ್ರಸಿದ್ಧಿಯನ್ನು ಗಳಿಸಿದರು ತದನಂತರ 1970 ರಲ್ಲಿ ಸಿರಿಗೇರಿ ಗೆ ಬಂದು ಇಲ್ಲಿನ ತಮ್ಮ ವಯಸ್ಕರ ನಲ್ಲ ಸೇರಿಸಿ ರಂಗ ತರಬೇತಿಯನ್ನು ನೀಡಿ ಮೊದಲ ಬಾರಿಗೆ 'ಶೋಕ ಚಕ್ರ' ಎಂಬ ಸಾಮಾಜಿಕ ನಾಟಕವನ್ನು ಮಾಡಿಸಿ ಸುತ್ತಮುತ್ತಲಿನ ಊರಿನ ಜನರ ಪ್ರೀತಿ ಗಳಿಸಿದರು. ನಂತರ 1976 ರಲ್ಲಿ ಮದಿರೆ ಮರಿಸ್ವಾಮಿಯವರೊಡಗೂಡಿ ಶ್ರೀ ಮಧುಕೇಶ್ವರ ನಾಟ್ಯ ಕಲಾ ಸಂಘವನ್ನು ಕಟ್ಟಿ ಪೌರಾಣಿಕ ನಾಟಕ ಗಳಾದ ರಕ್ತರಾತ್ರಿ,ಚಿತ್ರಾಂಗದ, ಭಕ್ತ ಸುಧನ್ವ ಹಾಗೂ ಸಾಮಾಜಿಕ ನಾಟಕಗಳಾದ ಅಣ್ಣ-ತಂಗಿ, ಗೌರಿ ಗೆದ್ದಳು,ಹೆಜ್ಜೆ ತಪ್ಪಿದ ಹೆಣ್ಣು, ದಾರಿದೀಪ, ತಾಯಿ ಇಲ್ಲದೆ ತಾಯಿಯಾದೆ ಮುಂತಾದ ನಾಟಕಗಳನ್ನು ಮಾಡಿಸಿ ರಾಜ್ಯದ ನಾನಾಕಡೆ ಪ್ರದರ್ಶನ ನೀಡಿದ್ದರು.
ಇಷ್ಟೇಲ್ಲದೆ ಕಂಪ್ನಿ ವಾದಿರಾಜ ಮತ್ತು ಮದಿರೆ ಮರಿಸ್ವಾಮಿಯರೊಡನೆ ಸೇರಿ ವಿಶಿಷ್ಟ ಮತ್ತು ನವೀನ ರೀತಿಯಲ್ಲಿ ರಾಗಸಂಯೋಜಿಸಿ ಮತ್ತು ದ್ವಾರಕೀಶ್, ವಿಜಕಲಾ,ಗಿರಿಜಾಶ್ರೀ,ಸುಮತಿ ಶ್ರೀಯಂತಹ ಸಿನಿಮಾ ನಟ ನಟಿಯರನ್ನು ಕರೆಸುವ ಮೂಲಕ ಪ್ರೇಕ್ಷಕರನ್ನು ಆಕರ್ಷಿಸಿ ನಾಟಕಗಳನ್ನು ಮಾಡಿಸಿದ್ದರು.
ಇದಲ್ಲದೆ ನಾಟಕ ತಾಲೀಮು ಸಮಯದಲ್ಲಿ ಗುರುವಿನಂತೆ ಶಿಸ್ತು ಮತ್ತು ಸಂಯಮಕ್ಕೆ ಒತ್ತು ಕೊಡುತ್ತಿದ್ದರು. ಆದರೆ ಹೊರಬಂದ ತಕ್ಷಣ ಗೆಳೆಯರಂತೆ ಎಲ್ಲರನ್ನು ಅಪ್ಪಿಕೊಳ್ಳುವ ವಿಶಿಷ್ಟ ಗಂಭೀರ ಸ್ವಭಾವದವರು.
 ಬೆಳಗಲ್ಲು ವೀರಣ್ಣ, ಕಲ್ಮಂಜಿ ಬಸವರಾಜ, ಶಂಕರ ನಾಯ್ಡು, ರಮೇಶ್ ಗೌಡ ಪಾಟೀಲ್, ಸುಭದ್ರಮ್ಮ ಮನ್ಸೂರ್,ತಬಲ ತಿಮ್ಮಪ್ಪ, ಭೀಮ ಲಿಂಗಪ್ಪ, ಪೀರಸಾಬ, ಪಿ.ರಾಜಾಸಾಬ್ ಇನ್ನು ಮುಂತಾದವರು ಗೌಡರ ಕಲಾ ಕುಲುಮೆಯಲ್ಲಿ ಸಿದ್ಧಗೊಂಡ ಕಲಾ ಪ್ರತಿಭೆಗಳು ಎಂದರೆ ತಪ್ಪಾಗಲಾರದು.
ಇವರ ಕಲಾ ಪ್ರತಿಭೆಯನ್ನು ಮೆಚ್ಚಿ ಅನೇಕ ಸಂಘ-ಸಂಸ್ಥೆಗಳು ಇವರಿಗೆ ಸಂಗೀತ ರತ್ನ, ಹಾರ್ಮೋನಿಯಂ ಚತುರ , ಸಂಗೀತ ವಿಶಾರದ ಮತ್ತು1996ರಲ್ಲಿ ಉಡುಪಿಯಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಯನ್ನು ನೀಡಲಾಗಿದೆ.
ಸಿರಿಗೇರಿಯಲ್ಲಿ ಗೌಡರ ನಾಯಕತ್ವದಲ್ಲಿ  ಭೀಮಲಿಂಗಪ್ಪ, ಬಸವನಗೌಡ,ಮಲ್ಲಿಕಾರ್ಜುನಗೌಡ ಇನ್ನು  ಮುಂತಾದ ಸ್ನೇಹಿತರೊಂದಿಗೆ ಸೇರಿ 60×150 ಅಳತೆಯ ಸುಸಜ್ಜಿತ ರಂಗಮಂದಿರವನ್ನು ಕಟ್ಟಲು ಅಡಿಪಾಯ ಹಾಕಿದರು.ಆದರೆ 10.03.2001 ರಂದು ನಾಗನಗೌಡರು ಹತರಾದ ನಂತರ ಅವರ ಒಡನಾಡಿ ಅಭಿಮಾನಿ ಬಳಗ ಸೇರಿ ಕಟ್ಟಿದ ರಂಗಮಂದಿರ ಕ್ಕೆ ಇವರ ಹೆಸರಿಟ್ಟು ಶ್ಲಾಘಿಸಿದರು.
ಮಡದಿ ಸುಲೋಚನಾ,ಮಕ್ಕಳಾದ ಶಶಿಧರ್ ಗೌಡ ,ಚಂದ್ರಶೇಖರ ಗೌಡ ಮತ್ತು ಶೋಭಾರನ್ನಲ್ಲದೆ ಇಡೀ ಕನ್ನಡ ನಾಡಿನ ರಂಗಭೂಮಿಯನ್ನಗಲಿ ನಾಡಿನ ಕಲಾ ಕುಸುಮಗಳ ಎದೆಯಲ್ಲಿ ಚಿರಸ್ಮರಣೀಯವಾಗಿದ್ದಾರೆ. ಇಂತಹ ಮಹಾನ್ ಕಲಾವಿದರನ್ನು ಬಹುತೇಕ ಜನರು ಮರೆತಿರುವುದು ವಿಷಾದನೀಯ ಅಂತೆಯೇ ಮುಂದಿನ ದಿನಮಾನದಲ್ಲಿ ನಾವು ಮತ್ತು ನಮ್ಮ ಮುಂದಿನ ಪೀಳಿಗೆಯವರು ಇಂತಹ ಮಹಾನ್ ರಂಗ ದಿಗ್ಗಜರನ್ನು ಚಿರಕಾಲ ಸ್ಮರಿಸು ವಂತಾಗಲಿ ಎಂಬುದೇ ಈ ಲೇಖನದ ಆಶಯ.

ಲೇಖನ
ಆರ್.ಪಿ.ಮಂಜುನಾಥ್. ಬಿ.ಜಿ.ದಿನ್ನೆ
ಸಾಹಿತಿ ಮತ್ತು ಕಾರ್ಯದರ್ಶಿ
ಕಾರಂತ ರಂಗಲೋಕ (ರಿ)

ಮೊ:9379857775    





 

Comments

Popular posts from this blog

ರಂಗ ಮಾಲಿಕೆ -೩೭ ನಡೆದಾಡುತ್ತಿದ್ದ ರಕ್ತರಾತ್ರಿ 'ನಾಡಂಗ ಬಸವರಾಜ'

ರಂಗ ಮಾಲಿಕೆ -೨೧ ಆಂಧ್ರ ನಾಟಕ ಪಿತಾಮಹ ಧರ್ಮಾವರಂ ರಾಮಕೃಷ್ಣಮಾಚಾರ್ಯರು

ರಂಗ ಮಾಲಿಕೆ -೨೭ ಅದಮ್ಯ ಚೇತನದ ರಂಗಮಣಿ 'ಸೋಗಿ ನಾಗರತ್ನಮ್ಮ'.