ರಂಗ ಮಾಲಿಕೆ -೧೧ ಸಾಂಬಶಿವ ದಳವಾಯಿ


 ಬಯಲು ಸೀಮೆಯ ಸಿಂಹ ಧ್ವನಿ - ಸಾಂಬಶಿವ ದಳವಾಯಿ


ಅರಳಿದ  ಪ್ರತಿಯೊಂದು ಹೂವು ದೇವರ ಮುಡಿ ಸೇರುವುದಿಲ್ಲ.ಉದಯಿಸಿದ ಪ್ರತಿಯೋರ್ವ ಕಲಾವಿದ ಕಲಾಮಾತೆಯ ಸುತರೆನಿಸುವುದಿಲ್ಲ. ಆದರೆ ಹುಟ್ಟಿನಿಂದಲೇ ಕಲಾ ಪ್ರೇಮಿಯಾಗಿ ಹತ್ತಾರು ಮನೆಗಳಿದ್ದ  ಪುಟ್ಟ ಹಳ್ಳಿಯಿಂದ ದಿಲ್ಲಿಯವರೆಗೆ ತನ್ನ ಕಲಾ ಚೈತನ್ಯವನ್ನು ಪಸರಿಸಿದ ವಿರಳರಲ್ಲಿ ವಿರಳರೆನಿಸಿದ ಒರ್ವರೆಂದರೆ ಅದು ಬಳ್ಳಾರಿ ಬಯಲು ಸೀಮೆಯ ಸಿಂಹ ಧ್ವನಿ ' ಸಾಂಬಶಿವ ದಳವಾಯಿ'.


ಬಾಲ್ಯ : 

 ಇವರು ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಬಿಷ್ಣಹಳ್ಳಿ ಎಂಬ ಪುಟ್ಟ ಹಳ್ಳಿಯ ' ರಾಮ ಸಿದ್ಧಪ್ಪ ದಳವಾಯಿ' ಮತ್ತು 'ಸಿದ್ಧಮ್ಮ' ದಂಪತಿಗಳ ಮಗನಾಗಿ  ೧೩-೦೪-೧೯೫೮ರಲ್ಲಿ ಜನಿಸಿದರು. ಇವರ ಪ್ರಾಥಮಿಕ ಶಿಕ್ಷಣ ಬಿಷ್ಣಹಳ್ಳಿ ಮತ್ತು ಕೂಡ್ಲಿಗಿಯ ಆಶ್ರಮ ಶಾಲೆಯಲ್ಲಿ ಸಾಗಿ ನಂತರ ಪ್ರೌಢಶಿಕ್ಷಣವನ್ನು ಚಿಕ್ಕಜೋಗಿಹಳ್ಳಿಯಲ್ಲಿ ನಿರ್ವಹಿಸುವಾಗ ಹತ್ತನೇ ತರಗತಿಯಲ್ಲಿ ಅನುತ್ತಿರ್ಣರಾಗುತ್ತಾರೆ.ಈ ಒಂದು ವರ್ಷದಲ್ಲೇ ಕಮಲಾಪುರದ ಪಂಪಾ ವಿದ್ಯಾಪೀಠದಲ್ಲಿ ತೋಟಗಾರಿಕೆ ಮತ್ತು ಕರಕುಶಲ ತರಬೇತಿ ಕೇಂದ್ರದಲ್ಲಿ ತರಬೇತಿ ತರುವಾಯ ಹತ್ತನೇ ತರಗತಿ ಉತ್ತಿರ್ಣರಾಗಿ ನಂತರ ದಾವಣಗೆರೆ  ಮೋತಿ ವೀರಪ್ಪ ಜೂನಿಯರ್‌ ಕಾಲೇಜಿನಲ್ಲಿ ಕಾಮರ್ಸ್ ವಿದ್ಯಾರ್ಥಿಯಾದರು.


ರಂಗದೊಲವು :  

ಮೊದಲಿಗೆ ಇವರಲ್ಲಿ ರಂಗದೊಲವನ್ನು ದೊಡ್ಡಾಟದ ಭಾಗವತರಾಗಿದ್ದ ಇವರ ತಂದೆ ತುಂಬಿದರು.ಅಂತೆಯೇ ಆಶ್ರಮ ಶಾಲೆಯಲ್ಲಿ ಓದುವಾಗ ವಾರಕ್ಕೊಮ್ಮೆ ನೆಡೆಯುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಗೀತಾಗಾಯನ ಮತ್ತು ನಾಟಕದ ಮಾತುಗಳ ಮೂಲಕ ರಂಗಚಹರೆ ಕಾಣಲಾರಂಭಿಸಿತು. ಈ ರಂಗದಾಸೆಗೆ ಆಸರೆಯಾಗಿ ಪಿಯುಸಿ ತರುವಾಯ ಮೊದಲ ರಂಗಗುರು ಮಾವ 'ಗುರುನಾಥಪ್ಪ ಮತ್ತಿಹಳ್ಳಿ'ಯವರ ಕಲಿಕೆಯಿಂದ 'ಬಂಧು ದ್ರೋಹ' ನಾಟಕದಲ್ಲಿ  ' ರಂಜನ್' ಎಂಬ ಖಳನಾಯಕನ ಪಾತ್ರದ ಮೂಲಕ ರಂಗಪ್ರವೇಶವಾಯಿತು.


ಹಳ್ಳಿಯಿಂದ ದಿಲ್ಲಿಗೆ: 


ದಳವಾಯಿ ಯವರಿಗೆ ಜೀವನದಲ್ಲಿ ಮೂರು ಕನಸುಗಳನ್ನು ಕಂಡದ್ದಿದರು.

೧.ದೇಶ ಕಾಯುವ ಯೋಧನಾಗಬೇಕು.ಇಲ್ಲವೆ

೨.ದೇಶದ ಸ್ವಾಸ್ಥ್ಯ ಕಾಪಾಡುವ ಕಲಾವಿದನಾಗಬೇಕು.ಇಲ್ಲವೆ

೩.ದೇಶಕ್ಕೆ ಅನ್ನವೀಯುವ ರೈತನಾಬೇಕು.

ಅಂತೆಯೇ ಪಿಯುಸಿ ಮುಗಿದಿದ್ದರಿಂದ ಕುಟುಂಬದ ಭಾರವನ್ನು ಹೊರುವ ಸಲುವಾಗಿ ಉದ್ಯೋಗವನ್ನು ಅರಸಿ ಬೆಂಗಳೂರಿಗೆ ಬಂದರು.ಆದರೆ ಯೋಧನಾಗಲು ಬೇಕಾದ ಮಾರ್ಗದರ್ಶನವಿಲ್ಲದೆ ವಯಸ್ಸಿನ ಮಿತಿ ಸುಮ್ಮನಾದರು.ಆದರೆ ಅಲ್ಲಿಯ ಗೆಳೆಯರೊಬ್ಬರ ಸಲಹೆಯಂತೆ ನಟನಾಗುವ ಕನಸಿನ ಸಾಕಾರಕ್ಕಾಗಿ ನೀನಾಸಂ( ನೀಲಕಂಠೇಶ್ವರ ನಾಟ್ಯ ಸಂಘ,ಹೆಗ್ಗೋಡು) ಗೆ ಅರ್ಜಿ ಸಲ್ಲಿಸಿ ಮತ್ತು ಕೆ.ವಿ.ಸುಬ್ಬಣ್ಣರ ಉತ್ತಮ ಪ್ರತಿಕ್ರಿಯೆಯೊಂದಿಗೆ ೧೯೮೦ರಲ್ಲಿ ಹೆಗ್ಗೋಡಿಗೆ ತೆರಳಿ ಒಂದು ವರ್ಷದ ಕಾಲ ರಂಗ ತರಬೇತಿ ಪಡೆಯುತ್ತಲೇ ಮೊದಲಿಗೆ ಕೆ.ವಿ.ಸುಬ್ಬಣ್ಣ ರ ನಿರ್ದೇಶನದಲ್ಲಿ ಶಿವರಾಮ ಕಾರಂತರ ' ಯಾರೋ ಅಂದರು' ಮತ್ತು ಮೋಲಿಯರ್ ರ ' ಆಷಾಢ ಭೂತಿ' , ಗಂಗಾಧರ್ ಸ್ವಾಮಿಯವರ ನಿರ್ದೇಶನದಲ್ಲಿ ' ವೇಟಿಂಗ್ ಫಾರ್ ದಿ ಘಾಡೋ' ಹಾಗೂ ಹುಚ್ಚಪ್ಪ ಮಾಸ್ತರ ' ಸಂಗ್ಯಾ ಬಾಳ್ಯಾ' ನಾಟಕಗಳಲ್ಲಿ ಭಾಗವಹಿಸಿ ಹೆಸರಾದರು.ಇದರ ನಡುವೆಯೇ ಕೆ.ವಿ.ಅಕ್ಷರ ರವರ ಸಲಹೆ ನಾಲ್ಕು ಎನ್.ಎಸ್.ಡಿ ಅರ್ಜಿ ತಂದು ಆಸಕ್ತರಿಂದ ಹಾಕಿಸಿದರು.ಅದರಲ್ಲಿ ಸಾಂಬಾಶಿವರು ಒಬ್ಬರು.ಅದೃಷ್ಟವೆಂಬಂತೆ ೧೯೮೨ ರ ಸಾಲಿನಲ್ಲಿ ಇಡೀ ದಕ್ಷಿಣ ಭಾರತದಿಂದ ಪರೀಕ್ಷಾರ್ಥಿಯಾಗಿ ಆಯ್ಕೆಯಾದ ಏಕೈಕರೆಂದರೆ ದಳವಾಯಿಯವರೊಬ್ಬರೇ.೧೯೮೨ ರಿಂದ ೧೯೮೪ ರವರಗೆ ವಿಶೇಷವಾಗಿ ' ಅಭಿನಯ'ದಲ್ಲಿ ತರಬೇತಿ ಪಡೆಯತ್ತ ಮಾರ್ಕೇಟ್ ನಲ್ಲಿ ತಿರುಗಾಡುತ್ತಾ ಬಹುಬೇಗ ಹಿಂದಿಭಾಷೆಯನ್ನು ಕಲಿತರು.ಅಂತೆಯೇ ಮೊದಲಿಗೆ  ರಬೀನ್ ದಾಸ್ ರ ನಿರ್ದೇಶನದಲ್ಲಿ 'ಅಬ್ ಕಹ ಜಾಯೇಗಾ ಬಾಲೆ' ನಾಟಕದಲ್ಲಿ ಚಿಕ್ಕ ಮಾತುಗಳ ಮೂಲಕವೇ ಇಡೀ ರಂಗ ಪ್ರೇಕ್ಷಕರ ಮನಸೆಳೆಯುವದಲ್ಲದೇ ಖ್ಯಾತ ಹಿಂದಿ ನಟ ಅನುಪಮ ಖೇರ್ ರಿಂದ ಪ್ರಶಂಸೆ ಗಳಿಸಿದ್ದರು.ಇದರ ನಂತರ ಇದೇ ತೆರನಾಗಿ ಸೀನಿಯರ್ ಓಂ ಪುರಿ ಮಾಡಿದ್ದ 'ಅಂಧಯುಗ' ನಾಟಕದಲ್ಲಿ ಮತ್ತೆ ಅವರ ' ಗುಂಗ ಶೈನಿಕ'  ಪಾತ್ರವನ್ನು ಇವರು ಮಾಡಿದಾಗ ಅಲ್ಲಿನ ಡೀನ್ ಇವರನ್ನು ಕರೆದು " ನೀನು  ಈ ಮುಂಚೆ ಇದೇ ಪಾತ್ರವನ್ನು ಮಾಡಿದ್ದ ಓಂ ಪುರಿಗಿಂತ ಅದ್ಭುತವಾಗಿ ಅಭಿನಯಿದ್ದೀಯಾ!  ಅಲ್ಲದೇ ಕನ್ನಡನಾಡಿಗೆ ನಿನ್ನಿಂದಾಗಿ  ಅದ್ಬುತ ಕಲಾವಿದನ ಕೊಡುಗೆಯಾಯಿತು" ಎಂದು ಶಹಬ್ಬಾಷ್ ಗಿರಿ ಪಡೆದಿದ್ದರು.


ರಾಜಧಾನಿಯಿಂದ ರಾಜಧಾನಿಗೆ:  


ಅಲ್ಲಿಂದ ಬಂದ ನಂತರ ಯಾವ ರಂಗ ಪ್ರವೀಣರ ಸಹಕಾರಿವಿಲ್ಲದೇ  ಬೆಂಗಳೂರಿನ ಬೀದಿ ಬೀದಿ ಅಲೆದು ಕೊನೆಗೆ ಗೆಳೆಯರ ಸಹಕಾರದಿಂದ   ಡಿ.ಆರ್.ಎಂ ವಿಜ್ಞಾನ ಕಾಲೇಜ್ ರಂಗ ಶಿಬಿರದಲ್ಲಿ ತಮ್ಮ ರಚನೆಯ ' 'ನೆರೆಹೊರೆ',ಎಂ.ಎಸ್.ಕೆ ಪ್ರಭುರ 'ಬದುಕ ಮನ್ನಿಸು ಪ್ರಭುವೇ' ಮತ್ತು ' ಕಡೆಗಲ್ಲಿ ಕಡೇಮನೆ' ನಾಟಕಗಳನ್ನು ನಿರ್ದೇಶಿಸಿದ್ದರು.ಮರುವರ್ಷವೇ ಜೈಪುರ ಗೆಳೆಯನ ಅಹ್ವಾನದಿಂದಾಗಿ  ಸಾರ್ತಾರ್ ರವರ ' ಮ್ಯಾನ್ ವಿತ್ತೌಟ್ ಷ್ಯಾಡೋ', ಎಲ್.ಹೆಚ್.ಖಾನ್ ರ 'ಬಾದಲೆ' ಮತ್ತು ಮೋಹನ್ ರಾಕೇಶ್ ರ ' ಅದಿರಾತ್ ಕೆ ಬಾದ್' ನಾಟಕಗಳನ್ನು ಯಶಸ್ವಿಗೊಳಿಸಿದರು. ಅಲ್ಲದೇ ೧೯೮೬ರಲ್ಲಿ ವಿಜಯ್ ತೆಂಡೂಲ್ಕರ್ ರ ' ಚಾರ್ ದಿನ್' ನಾಟಕವನ್ನು ಅನುವಾದ ಮತ್ತು ನಿರ್ದೇಶನ ಮಾಡಿ,ಬಿ.ವಿ ಕಾರಂತ್ ಜೊತೆಯಲ್ಲಿಯೇ ೧೯೮೭ರಲ್ಲಿ  ಕೃಷ್ಣ ಮಸಡಿ ನಿರ್ದೇಶನದ ' ಅವಸ್ಥೆ' ಸಿನಿಮಾದಲ್ಲಿ ಪೋಲಿಸ್ ಆಗಿ ಅಭಿನಯಿಸಿ ಪರವಾಗಿಲ್ಲ ಎಂದೆನೆಸಿದರು.ಆದರೆ ಅಷ್ಟೇನೂ ಸುದ್ಧಿಯಾಗದೆ ಸಿನಿ ರಂಗದಿಂದ ದೂರವಾದರು.


ರಂಗದಿಂದ ಶಾಲೆಯೆಡೆಗೆ: 


ಸಿನಿ ರಂಗದಿಂದ ದೂರವಾಗಿ ೧೯೮೮- ೮೯ರಲ್ಲಿ ಬೆಂಗಳೂರಿನ ಉದಯ ಕಲಾನಿಕೇತನ  ಮತ್ತು ವಿಜಯಾ ಫಿಲ್ಮ್ ಇನ್ಸ್ಟಿಟ್ಯೂಟ್ ನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದರು.ಪುನಃ ಹಳ್ಳಿಗೆ ಬಂದು ಅಪ್ಪನ ಮಾತಿನಂತೆ

೧೯೯೦ರಲ್ಲಿ  ಸರಸ್ವತಿಯವರನ್ನು ವರಸಿ ವಿವಾಹಿತರಾದರು.

ಬಹುದಿನಗಳ ನಂತರ ಕೈ ಬೀಸಿ ಕರೆಯುತ್ತಿದ ರಂಗಭೂಮಿಯನ್ನು ಬಿಡಲಾಗದೇ ಮತ್ತೆ ೧೯೯೩ ರಿಂದ ೨೦೧೨ ರವರಗೆ ಸಂಪೂರ್ಣ ಸಾಕ್ಷರತ ಆಂದೋಲನ,ಲೋಕ ಶಿಕ್ಷಣ ಅಂದೋಲನ, ಸಾಕ್ಷರ ಭಾರತ್,ಸಾಕ್ಷಾರ ಕಿರಣ,ಸಾಕ್ಷಾರ ದೀಪ,ಸಾಕ್ಷರ ವಿಜಯದಂತಹ ರಾಷ್ಟ್ರ ಮಟ್ಟದ ಜಾಗೃತಿ ಕಾರ್ಯಕ್ರಮಗಳಲ್ಲಿ ನಟ,ನಿರ್ದೇಶಕ, ರಾಗ ಸಂಯೋಜಕ,ಗಾಯಕರಾಗಿ ಕಾರ್ಯ ನಿರ್ವಹಿಸಿ ರಾಜ್ಯ ವ್ಯಾಪಿಯಾಗಿದ್ದಾರೆ.


ರಂಗ ಬೇಸಾಯ : 


ಕಲಾ ಧೀಮಂತರಾದ ದಳವಾಯಿಯವರಿಗೆ ಕಲಾ ತುಡಿತ ತಡೆ ಹಿಡಿಯಲಾಗದೆ ರಾಜ್ಯವ್ಯಾಪಿ ಸಂಚಾರಿಸುತ್ತ ಧಾರವಾಡ ವಿ.ವಿ.ಯ ವಿಶ್ವ ಚೇತನ ಮಕ್ಕಳಿಗೆ ಏಣಿಗಿ ನಟರಾಜ್ ನೇತೃತ್ವದಲ್ಲಿ ರಂ.ಶಾ.ಲೋಕಪುರರ ' ಸಂಕಾನಟ್ಟಿ ಚಂದ್ರಿ' ನಾಟಕ ನಿರ್ದೇಸಿದರು.೧೯೯೬ ರಲ್ಲಿ ಅಜ್ಜಪುರಂ ಪ್ರೌಢಶಾಲೆಯಲ್ಲಿ, ೧೯೯೮ರಲ್ಲಿ ಇಪ್ಟಾ(ಭಾರತೀಯ ಜನಕಲಾ ಸಮಿತಿ)ಯಲ್ಲಿ, ೧೯೯೭ರಲ್ಲಿ ಚಿತ್ರದುರ್ಗ ಮದಕರಿ ಕ್ರೀಡಾ ಸಂಘದಲ್ಲಿ,ಆರ್.ಸಿ.ಹೆಚ್ ಸಂತಾನೋತ್ಪತ್ತಿ ಜನಾರೋಗ್ಯ ರಂಗ ಶಿಬಿರದ ಪ್ರಯುಕ್ತ ಢಾಕಾದವರೆಗೆ,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ರಂಗ ಶಿಬಿರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದಾರೆ.

೧೯೯೮ರಲ್ಲಿ ಕನ್ನಡ ನಾಡು ಸಾಕ್ಷರ ನಾಡು ಪ್ರಯುಕ್ತ ಬೀದರ್ - ಕೊಹಿನೂರಿನಿಂದ- ದಾವಣಗೆರೆ ವರೆಗೆ ಕಾಲ್ನಾಡಿಗೆ  ಜಾಥಾ ಮೂಲಕ ' ಸ್ವತಂತ್ರ-೫೦' ನಾಟಕದ ೨೫೦೦ಕ್ಕೂ ಹೆಚ್ಚು ಪ್ರದರ್ಶನ ನೀಡಿದ್ದಾರೆ.ಇದರೊಂದಿಗೆ ಇಂಡಿಯನ್ ಪೀಪಲ್ ಥಿಯೇಟರ್‌ ಅಸೋಸಿಯೇಷನ್‌ ನಲ್ಲಿ ೨೦೦೦ ರಿಂದ ೨೦೦೭ ವರಗೆ  ರಾಷ್ಟ್ರೀಯ ಕಮಿಟಿ ಸದಸ್ಯರಾಗಿದ್ದರು.ಇದರೊಂದಿಗೆ ಚಿತ್ರದುರ್ಗದ ' ಜಮೂರಾ' ದ ಪ್ರಿನ್ಸಿಪಾಲ್ ರಾಗಿದ್ದರು.


ಪೃಥ್ವಿ ಹಮ್ಮಿಂಗ್ ಥಿಯೇಟರ್ ನಿರ್ಮಾಣ:


ಇವರ ಸುಪುತ್ರ ಬೆಂಗಳೂರು ಎನ್.ಎಸ್.ಡಿಯಲ್ಲಿ ಓದುವಾಗಲೇ ಸಿ.ಬಸವಲಿಂಗಯ್ಯರ ಕುವೆಂಪು ವಿರಚಿತ 'ಮಲೆಗಳಲ್ಲಿ ಮದುಮಗಳು' ನಾಟಕದ ಗುತ್ತಿ ಪಾತ್ರ ಮತ್ತು ವಾರ್ತಾ ಇಲಾಖೆಯ ದೇವರಾಜ್ ಅರಸು ಕಥಾನಕದ ಅರಸು ಮತ್ತು ಮೇಳಗಾರನ ಪಾತ್ರದ ಮೂಲಕ ಇಡೀ ನಾಡಿನಾದ್ಯಂತ ಹೆಸರಾದ 'ರಾಕೇಶ್ ದಳವಾಯಿ'ಯೊಂದಿಗೆ ತಮ್ಮ ಹುಟ್ಟೂರಿನಲ್ಲೇ ' ಹಮ್ಮಿಂಗ್ ಥಿಯೇಟರ್' ಎಂಬ ರಂಗಸಂಸ್ಥೆಯನ್ನು ಹುಟ್ಟು ಹಾಕಿದ್ದಾರೆ.ಅಲ್ಲದೇ೨೦೧೧-೧೨ರಲ್ಲಿ ಆಸಕ್ತ ಯುವಕರಿಗೆ ರಂಗ ತರಬೇತಿ ಶಿಬಿರ, ಉದ್ಯೋಗ ಖಾತ್ರಿ ಜಾಗೃತಿ ಜಾಥಾ ಶಿಬಿರಗಳನ್ನು ಮಾಡಿದರು. ೨೦೧೨-೧೪ ರವರಗೆ ಬೆಂಗಳೂರಿನ ಆದರ್ಶ ಫಿಲ್ಮ್ ಇನ್ಸ್ಟಿಟ್ಯೂಟ್ ನಲ್ಲಿ ಉಪನ್ಯಾಸಕರಾಗಿದ್ದರು.೨೦೧೫-೧೯ರವರಗೆ ' ದಳವಾಯಿ ಪ್ರೇಮ ಪ್ರಸಂಗ' ನಾಟಕ ಮತ್ತು ೨೦೧೭ರಲ್ಲಿ ಮಕ್ಕಳಿಗೆ' ಸ್ವತಂತ್ರ -೫೦' ನಾಟಕವನ್ನು ಪ್ರಸ್ತುತ ಪಡಿಸಿದ್ದಾರೆ.ಹೀಗೆ ಇಂದಿಗೂ ರಂಗ ಚೈತನ್ಯದೊಂದಿಗೆ ಅನೇಕ ಸ್ಥಳಗಳಿಗೆ ತೆರಳಿ ರಂಗಶಕ್ತಿಯನ್ನು ಧಾರೆಯೆರೆಯುತ್ತಿದ್ದಾರೆ.


ದಳವಾಯಿ ಯವರ ರಚನೆಯ ನಾಟಕಗಳು: 


ಇವರು ಇಲ್ಲಿಯವರೆಗೆ ೧೪ ನಾಟಕಗಳು ಮತ್ತು ೪೦ ಕ್ಕೂ ಹೆಚ್ಚಿನ ಕವನಗಳನ್ನು ರಚಿಸಿದ್ದಾರೆ. ಆದರೆ ಆರ್ಥಿಕ ಸಬಲತೆಯ ಕೊರತೆಯಿಂದಾಗಿ ಅಪ್ರಕಟವಾಗಿವೆ.ಅವುಗಳಲ್ಲಿ ಕೆಲವು ಇಲ್ಲಿವೆ.

೧.ನೆರೆಹೊರೆ

೨.ಪತ್ರಿಕೆ 

೩.ದುರಂತ

೪.ಸಂದೇಶ

೫.ಬೇತಾಳನ ಕಥೆ

೬.ಸಂಬಂಧ ಹಾಗೂ ಇತ್ಯಾದಿ.


ಸಂದ ಪ್ರಶಸ್ತಿ ಪುರಸ್ಕಾರಗಳು: 


೧.ಕ್ರಿ.ಶ.೧೯೯೭-೯೮ರಲ್ಲಿ 'ಜ್ಯೋಗೇರ ಆಟ 'ಸಂಶೋಧನಾ ಕಾರ್ಯಕ್ಕೆ ಮಾನವ ಸಂಪನ್ಮೂಲ ಕೇಂದ್ರದಿಂದ ' ಬೆಸ್ಟ್ ಔಟ್ ಸ್ಟ್ಯಾಂಡಿಂಗ್ ಆರ್ಟಿಸ್ಟ್ ಅವಾರ್ಡ್.

೨.೨೦೦೭ರಲ್ಲಿ ಬಳ್ಳಾರಿಯ ಡಿ.ಆರ್.ಕೆ.ರಂಗಸಿರಿಯಿಂದ ' ಡಿ.ಆರ್.ಕೆ ಆವಾರ್ಡ್'.

೩.೨೦೧೦ರಲ್ಲಿ ಚಿಕ್ಕ ಬಾಣವಾರದ ಕಲಾ ರಸಿಕರಿಂದ ' ವಿಕಸ ರತ್ನ' ಅವಾರ್ಡ್.

೪.೨೦೧೪ರಲ್ಲಿ ಕಾನಾಹೊಸಳ್ಳಿ ಅಭಿಮಾನಿಗಳಿಂದ ' ರಂಗ ಚೇತನ' ಅವಾರ್ಡ್.

೫.೨೦೧೬ರಲ್ಲಿ ಬಿ.ಜಿ.ದಿನ್ನೆ ಕಾರಂತ ರಂಗಲೋಕದಿಂದ ' ಕಾರಂತ ರತ್ನ' ಅವಾರ್ಡ್.

೬.೨೦೧೭ ರಲ್ಲಿ ಬಳ್ಳಾರಿಯ ಸಿ.ಜಿ.ಕೆ ರಂಗ ಪುರಸ್ಕಾರ .

೭.ಬೆಂಗಳೂರು ದೂರದರ್ಶನ ಚಂದನ ವಾಹಿನಿಯ ರಂಗ ಸೇವೆಯ ಗುರುತಿಸಿ  ವಾರ್ಷಿಕ ' ಚಂದನ ಪ್ರಶಸ್ತಿ' ನೀಡಿ ಗೌರಸಿದೆ.


ಕುಗ್ರಾಮದಿಂದ ದೆಹಲಿಯವರೆಗೆ ತಲುಪಿ ತಮ್ಮ ಕಲಾ ಶ್ರೀಮಂತಿಕೆಯನ್ನು ಮೆರೆದಿದ್ದರೂ ಇಂದು ತುಂಬಾ ಸರಳವಾಗಿ ರಂಗಕಾರ್ಯ ಇರದ ಸಮಯವನ್ನು ಸದಾ ಹೊಲದಲ್ಲಿ ಕಳೆಯುವ ಮೂಲಕ ರಂಗ ಕಾಯಕದಲ್ಲೇ ಕೈಲಾಸ ಕಾಣುತ್ತಿರುವ ಸಾಂಬಾಶಿವ ದಳವಾಯಿಯವರಿಗೆ ಇನ್ನೂ ದೊಡ್ಟ ಗೌರವ ದಕ್ಕಲಿ.ಬದುಕಿನಲ್ಲಿ ಏನೇ ಬರಲಿ ,ಎಷ್ಟೇ ಕಷ್ಟ ಇರಲಿ ಅವೆಲ್ಲವನ್ನೂ ಮೆಟ್ಟಿ ನಿಲ್ಲುವ ಪ್ರತಿಯೋರ್ವನು ಕಲಾವಿದನೇ.ಅಲ್ಲದೆ ತನ್ನ ಅಳಲನ್ನು ನುಂಗಿ ನಲಿವನ್ನು ಉಣಬಡಿಸುವುದೇ ಕಲಾಕೈಂಕರ್ಯವಾಗಿದೆ ಎಂದು ಹೆಮ್ಮೆಯಿಂದಲೇ ನುಡಿಯುತ್ತಾರೆ.



✍️ಆರ್.ಪಿ.ಮಂಜುನಾಥ್. ಬಿ.ಜಿ.ದಿನ್ನೆ.

ಸಾಹಿತಿ/ಕಾರ್ಯದರ್ಶಿ, ಕಾರಂತ ರಂಗಲೋಕ (ರಿ).

ಮೊ:937985557

E - mail.-Manjuamazing7@gmail.com

Comments

Popular posts from this blog

ರಂಗ ಮಾಲಿಕೆ -೩೭ ನಡೆದಾಡುತ್ತಿದ್ದ ರಕ್ತರಾತ್ರಿ 'ನಾಡಂಗ ಬಸವರಾಜ'

ರಂಗ ಮಾಲಿಕೆ -೨೧ ಆಂಧ್ರ ನಾಟಕ ಪಿತಾಮಹ ಧರ್ಮಾವರಂ ರಾಮಕೃಷ್ಣಮಾಚಾರ್ಯರು

ರಂಗ ಮಾಲಿಕೆ -೨೭ ಅದಮ್ಯ ಚೇತನದ ರಂಗಮಣಿ 'ಸೋಗಿ ನಾಗರತ್ನಮ್ಮ'.