ರಂಗ ಮಾಲಿಕೆ -೧೦ ಕೆ.ಜಗದೀಶ್
ನೇರ ನಡೆಯ ರಂಗ ಚಿಲುಮೆ - ಕೆ.ಜಗದೀಶ್
ಆಟವಾಡುವ ವಯಸ್ಸಿನಲ್ಲೇ ಅಟ್ಟವೇರಿ ಅಸಾಧಾರಣ ಚಿಂತನೆಯ ಮೂಲಕ ಬಳ್ಳಾರಿ ರಂಗಭೂಮಿಗೆ ಹೊಸದಾಗಿ ಆಯಾಮವನ್ನು ಕಲ್ಪಿಸಿಕೊಟ್ಟು ರಂಗಮಂದಿರವನ್ನೇ ಕಾಣದ ಹೊಸ ರಂಗ ಪ್ರತಿಭೆ ಮತ್ತು ಪ್ರೇಕ್ಷಕ ವರ್ಗವನ್ನು ಸೃಷ್ಟಿಸಿದ ಸೃಜನಶೀಲ ರಂಗ ಚಿನ್ಮಯಿಯಂದರೆ ಅದು ಬಯಲುಸೀಮೆಯ ರಂಗಚಿಲುಮೆ ಕೆ.ಜಗದೀಶ್.
ಬಾಲ್ಯಜೀವನ
ಇವರು ಶ್ರೀ ಶರಣಪ್ಪ ಮತ್ತು ಶ್ರೀಮತಿ ಹಂಪಮ್ಮ ದಂಪತಿಗಳ ಸುಪುತ್ರರಾಗಿ ಬಳ್ಳಾರಿಯಲ್ಲಿ ೧೯೬೦ ರಲ್ಲಿ ಜನಿಸಿದರು. ಇವರು ಪ್ರಾಥಮಿಕ ಶಿಕ್ಷಣ ಮಾಧ್ಯಮಿಕ ಶಿಕ್ಷಣವನ್ನು ಬಳ್ಳಾರಿಯಲ್ಲಿ ಪಡೆದರು. ನಂತರ ಬಿ.ಕಾಂ ಪದವಿಗೆ ವೀರಶೈವ ಕಾಲೇಜಿಗೆ ಸೇರಿದಾಗ ತಮ್ಮ ೧೮ನೇ ವಯಸ್ಸಿನಲ್ಲಿಯೇ ಬಂದ ಪ್ರಗತಿ ಗ್ರಾಮೀಣ ಬ್ಯಾಂಕ್ ಉದ್ಯೋಗವನ್ನು ಗಿಟ್ಟಿಸಿಕೊಂಡು ಆ ಕಾಲದ ಆರು ರೂ.ಗಳ ದಿನಗೂಲಿ ನೌಕರಿಯಾಗಿ ಹಡಗಲಿಗೆ ತೆರಳಿದರು.ಅನೇಕ ಕಷ್ಟಗಳ ನಡುವೆ ಪದವಿಯನ್ನು ನಂತರ ಕರ್ನಾಟಕ ವಿ.ವಿಯಿಂದ ಪಡೆದರು.ಅಲ್ಲಿಂದ ರಂಗಭೂಮಿ ಮತ್ತು ಸಂಸಾರವನ್ನು ಹೆಗಲ ಮೇಲೋತ್ತು ಎಲ್ಲಿಯೂ ನಿಲ್ಲದೇ ಸಾಗುತ್ತ ನೆಡೆದಿಹರು.
ರಂಗಪ್ರವೇಶ
ಇವರನ್ನು ಸ್ವತಃ ಭಜನಾ ಗುಂಪಿನಲ್ಲಿ ಹಾರ್ಮೋನಿಯಂ ಕಲಾವಿದರಾಗಿದ್ದ ತಮ್ಮ ತಂದೆಯೇ ೧೯೬೮ ರಲ್ಲಿ ಗಿರಿಜಾ ಕಲ್ಯಾಣ ಬಯಲಾಟದಲ್ಲಿ ೮ ವರ್ಷ ವಯಸ್ಸಿನ ಜಗದೀಶರಿಗೆ ಬಾಲನಟನ ಅಭಿನಯ ಮಾಡಿಸಲು ಮುಂದಾದಾಗ ಈಗಾಗಲೇ ಭಜನಾ ಗಾಯನದಲ್ಲಿ ಗುರುತಿಸಿಕೊಂಡಿದ್ದ ಜಗದೀಶರಿಗೂ ಅಭಿನಯದ ಒಲುಮೆಯಿಂದಾಗ ಬಣ್ಣ ತಾನಾಗಿಯೇ ಮೆತ್ತಿಕೊಂಡಿತು.ಮೊದಲ ನಾಟಕದ ಯಶಸ್ಸಿನ ತರುವಾಯ ೧೯೭೦ ರಲ್ಲಿ ಗಂಗೆ ಗೌರಿ ಜಾನಪದ ನಾಟಕದಲ್ಲಿ ಗಂಗೆಯ ಪಾತ್ರವನ್ನು ಮಾಡುವ ಯಶಸ್ವಿ ರಂಗಪ್ರವೇಶ ಮಾಡಿದರು. ಅಲ್ಲಿಂದ ಮೆತ್ತಿಕೊಂಡ ಬಣ್ಣ ಹಚ್ಚೆ ಹೊತ್ತಲಾರಂಭಿಸಿತು.ಪಕ್ಕದ ಬೀದಿಯಲ್ಲಿದ್ದ ಶ್ರೀ ರಾಜರಾಜೇಶ್ವರಿ ಕಲಾ ಸಂಘದ ಮೂಲಕ ಪ್ರತಿ ಉತ್ಸವದಲ್ಲೂ ಒಂದೊಂದು ನಾಟಕವಾಡುತ್ತ ಕಾಲ ಕಳೆದಂತೆ ಸಮ ಮನಸ್ಕರ ( ಕೆ.ಮಲ್ಲೇಶ್,ಕೆ.ಎಂ.ಸಿದ್ದಲಿಂಗಯ್ಯ, ಕೆ.ಎಂ.ಗುರುಬಸವರಾಜ್) ಗುಂಪು ರಚನೆಯಾಯ್ತು ಆ ಗುಂಪಿನ ನಾಯಕನಾಗಿ ಅದಕ್ಕೆ ' ಮಯೂರ ಕಲಾ ಸಂಘ' ಎಂತಲೂ ೧೯೭೮ರಲ್ಲಿ ನಾಮಕರಣ ಮಾಡಿದ್ದಾಯಿತು.ಹೀಗೆ ಒಂದೆಡೆ ರಂಗಭೂಮಿಯಲ್ಲಿ ಉತ್ತುಂಗದೆಡೆಗೆ ಏರುತ್ತಿದ್ದರೆ ಇತ್ತ ಸಂಸಾರದಲ್ಲಿ ಅಪ್ಪ ಅಮ್ಮನ ವ್ಯವಹಾರ ನಷ್ಟ ಮತ್ತು ಅಕಾಲಿಕ ಮರಣದಿಂದಾಗಿ ಅಧೋಪತನ ಕಾಣುವ ಹೊತ್ತಲ್ಲೇ ತಮ್ಮ ಬ್ಯಾಂಕ್ ಉದ್ಯೋಗವೇ ಕೈ ಹಿಡಿಯಿತು.
ಜಗದೀಶರ ರಂಗ ಹಾದಿ :
* ತಮ್ಮ ಸಂಘದ ಗೆಳೆಯರೊಡನೆ ಸೇರಿ ನಾಟಕ ಸ್ಪರ್ಧೆಯಲ್ಲಿ ಭಾಗವಹಿಸಲು ಮುಂದಾದರು. ಆಗ ಜಗದೀಶರೇ ಸ್ವತಃ ತಮ್ಮ ವಿವೇಚನೆಗೆ ತಕ್ಕಂತೆ ನಾಟಕ ರಚಿಸಿ,ನಿರ್ದೇಶಿಸಿ ,ಅಭಿನಯಿಸಲಾರಂಭಿಸಿದರು.ಅಂತೆಯೇ ಮೊದಲಿಗೆ ೧೯೭೮ರಲ್ಲಿ ' ಒಂದು ಊರಿನ ಕಥೆ' ಯನ್ನು ಬರೆದು ಆ ನಾಟಕಕ್ಕಾಗಿ ಅನೇಕ ತಯಾರಿ ಮಾಡಲು ಮುಂದಾದರು ಅಂತೆಯೇ ನಾಟಕದ ಒಂದು ದೃಶ್ಯದ ಶಾಡೋ ಪ್ಲೇ ಮಾಡುವ ಸಲುವಾಗಿ ತಮ್ಮ ಕೋಣೆಯ ಕಿಟಿಕಿ ಮುಚ್ಚಿ ಕತ್ತಲಾಗಿಸಿ ಅಮುಲ್ಸ್ ಡಬ್ಬಿಗೆ ಬಲ್ಬ್ ಹಾಕಿ ,ಅಪ್ಪನ ಪಂಚೆಯನ್ನೇ ಸೈಕ್ಲೋರಮದಂತೆ ಬದಲಾಯಿಸಿ ಪ್ರಯೋಗಿಸಿದ್ದರು.ನಾಟಕದ ತಯಾರಿ ನಂತರ ಕೂಡ್ಲಿಗಿಯಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ಆಯೋಜನೆಯ ನಾಟಕ ಸ್ಪರ್ಧೆಯಲ್ಲಿ ಭಾಗವಹಿಸುವ ಸಲುವಾಗಿ ಗೆಳೆಯರೆಲ್ಲ ಸೇರಿ ನೂರು ರೂಪಾಯಿ ಸಾಲ ಮಾಡಿ ಫೀಜ್ ತುಂಬಿ, ಬುತ್ತಿ ಕಟ್ಟಿಕೊಂಡು ಹೋಗಿ ಅಭಿನಯಿಸಿ ಯಶಸ್ವಿಯಾಗಿದ್ದರು.ಹೀಗೆ ಸಂಸ್ಥೆಯ ಮೂಲಕ ತಮ್ಮ ರಂಗ ಚಟುವಟಿಕೆಗಳಿಗೆ ನೀರೆರೆಯಲಾರಂಭಿಸಿದರು. ಅಂತೆಯೇ ಬಳ್ಳಾರಿಯ ರಂಗಭೂಮಿ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ೧೯೯೦ರಲ್ಲಿ ‘ಮ.ಕ.ಸಂ ನಾಟಕ ಸ್ಪರ್ಧೆ’ಯನ್ನು ಏರ್ಪಡಿಸಿದರು. ನಂತರ ಅನೇಕ ಜನ ಜಾಗೃತಿ ಬೀದಿ ನಾಟಕಗಳನ್ನು ಮಾಡಿದರು. ಅಲ್ಲದೇ ಇತರ ಸಂಘ ಸಂಸ್ಥೆಗಳು ಏರ್ಪಡಿಸಿದ ನಾಟಕ ಸ್ಪರ್ಧೆಗಳಲ್ಲಿ ಭಾಗವಹಿಸುವ ಸಲುವಾಗಿ ದೋಣಿಮಲೈ, ಉಡುಪಿ, ಜೋಗ್‌ಫಾಲ್ಸ್, ಶಿವಮೊಗ್ಗ, ಸಿರಿಗೆರೆ, ಹೊಸಪೇಟೆ, ಕೆ.ಆರ್.ನಗರ ಮುಂತಾದ ಕಡೆಗಳಲ್ಲಿ ಹೋಗಿ ಭಾಗವಹಿಸಿ ಬಹುಮಾನಗಳನ್ನು ಗೆದ್ದಿರುವ ಅನೇಕ ಪ್ರಸಂಗಗಳನ್ನು ಮಂದಹಾಸದ ಬೆರಗು ಕಣ್ಣಿನಿಂದಲೇ ವಿವರಿಸುತ್ತಾರೆ.
ನಾಟಕದ ಜೊತೆಯಲ್ಲಿ ಕಥೆ ,ಕವನಗಳನ್ನು ಬರೆದು ಹಲವಾರು ಪತ್ರಿಕೆಗಳಿಗೆ ಕಳುಹಿಸಿ ಅಲ್ಲಿಯ ಸ್ಪರ್ಧೆಯಲ್ಲಿಯೂ ಬಹುಮಾನಗಳನ್ನು ದೋಚಿದ್ದಾರೆ.
ಬಹುತೇಕರಿಗೆ ಲೇಖನಿ ಖಡ್ಗವಾದರೆ ಇವರಿಗೆ ಮಾತ್ರ ಲೇಖನಿ ಖಡ್ಗವೂ ಹೌದು ಕುಂಚವೂ ಹೌದಾಗಿದೆ. ಅವರ ಕುಂಚದಿಂದ ಅರಳಿದ ಪ್ರತಿಯೊಂದು ಹೂವು ಸ್ವಾರಸ್ಯಕರ, ಆಹ್ಲಾದಕರ. ಅಂತೆಯೇ ಅವರಿಂದ ಅರಳಿದ ಅನೇಕ ಹೂವುಗಳು ಇಂದಿಗೂ ಕಲಾ ರಸಿಕರ ಕಲಾ ಪ್ರೇಕ್ಷಕರ ಮನಸೆಳೆಯುತ್ತಿವೆ.
ಮ.ಕ.ಸಂ ನಿಂದ ಅಭಿನಯ ಕಲಾ ಕೇಂದ್ರದೆಡೆಗೆ:
ಗಣೇಶ ಉತ್ಸವದಿಂದ ಹಂಪಿ ಉತ್ಸವದವರೆಗೆ ನಾಟಕಗಳಲ್ಲಿ ಭಾಗವಹಿಸಿ ಪ್ರಸಿದ್ಧರಾದಂತೆ ಸದಾ ರಂಗಜಪ ಮಾಡುತ್ತಿದ್ದ ಜಗದೀಶರಿಗೆ ಗೆಳೆಯರ ಅಸಡ್ಡೆ ಮತ್ತು ಅನುಚಿತ ವರ್ತನೆಗಳು ಹಿಡಿಸಲಾಗದೆ ತಾವೇ ಕಟ್ಟಿದ ಸಂಘದ ಜವಾಬ್ದಾರಿಗಳನ್ನು ಗೆಳೆಯರಿಗೆ ಬಿಟ್ಟು ನಗು ನಗುತ್ತಲೇ ಹೊರಬಂದು ೨೦೦೪ ರಲ್ಲಿ ಅಭಿನಯ ಕಲಾ ಕೇಂದ್ರವನ್ನು ಹುಟ್ಟು ಹಾಕಿದರು. ಅಂದಿನಿಂದಲೇ ಪ್ರೇಕ್ಷಕರ ಗ್ಯಾಲರಿಯಿಂದ ನಾಟಕ ನೋಡಲಾರಂಭಿಸಿ ಖಾಲಿ ಖಾಲಿಯಾಗಿರುತ್ತಿದ್ದ ರಂಗ ಮಂದಿರವನ್ನು ತುಂಬಿ ತುಳುಕುವಂತೆ ಮಾಡುವ ಸಲುವಾಗಿ ನಾಟಕ ರಚನೆಯಲ್ಲಿ ,ನಿರ್ದೇಶನದಲ್ಲಿ ನಾವೀನ್ಯತೆ ಕಂಡುಕೊಂಡರು. ಅಂತೆಯೇ ಮೊದಲಿಗೆ ಸಾಹಿತ್ಯಕ ನಾಟಕ ಬರವಣಿಗೆಯಿಂದ ಅಧ್ಯಾತ್ಮಿಕ ಮತ್ತು ಐತಿಹಾಸಿಕ ನಾಟಕ ಬರವಣಿಗೆಗೆ ಮಹತ್ವ ಕೊಟ್ಟರು. ಅದು ಸ್ಥಳೀಯ ಸಿದ್ಧಿಪುರುಷರ ಪವಾಡ ಆಧಾರಿತವಾಗಿಸಿದರು.ಅದಕ್ಕಾಗಿ ಬಹುತೇಕ ಸಮಯ ಮೀಸಲಿಟ್ಟರು.ಸಮಯದ ಅಭಾವ ತುಂಬಲಾಗದೇ ತಮ್ಮ ಬ್ಯಾಂಕ್ ಉದ್ಯೋಗಕ್ಕೆ ತಿಲಾಂಜಲಿ ಹೇಳಿದರು.ತರುವಾಯ ನಾಟಕಗಳಲ್ಲಿ ತಂತ್ರಜ್ಞಾನ ಬಳಕೆಯ ಯೋಚನೆ ತಲೆದೋರಿ ನಟರ ಧ್ವನಿ ಮತ್ತು ರಂಗಮಂದಿರಗಳ ಧ್ವನಿವರ್ಧಕಗಳ ಸಮಸ್ಯೆ ನಿವಾರಿಸುವ ಸಲುವಾಗಿ ರೆಕಾರ್ಡಿಂಗ್ ಮತ್ತು ಸೀನರಿ ವ್ಯವಸ್ಥೆಗೆ ಮುಖ ಮಾಡಿದರು.ನಾಟಕಗಳ ನಾವೀನ್ಯತೆಯಿಂದಾಗಿ ಪ್ರೇಕ್ಷಕ ವರ್ಗದಲ್ಲೂ ದ್ವಿಗುಣಗೊಂಡು ಇಂದಿಗೂ ಪರ ಸ್ಥಳದ ಪ್ರೇಕ್ಷಕ ಗಣದಿಂದ ಬೇಡಿಕೆ ಹೆಚ್ಚಲಾರಂಭಿಸಿದೆ.ಅಲ್ಲದೇ ನಟವರ್ಗಕ್ಕೂ ಸಂಭಾವನೆ ನೀಡುವ ಕಾರ್ಯಕ್ಕೂ ಮುಂದಾದರು.
ರಂಗ ಶಿಸ್ತಿನ ಸಿಪಾಯಿ:
ಇವರು ನಟರ ನಟನೆಗಿಂತಲೂ ಅವರ ರಂಗಶಿಸ್ತಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವವರು.ರಂಗ ತಾಲೀಮಿಗೆ ನೀಡಿದ ಸಮಯಕ್ಕಿಂತ ೨೦ ನಿಮಿಷ ಮುಂಚಿತವಾಗಿ ತಾವು ಬಂದಿರುತ್ತಿರುತ್ತಿದ್ದರು.ಯಾರಾದರೂ ಹೇಳಿದ ಸಮಯಕ್ಕಿಂತ ಕೊಂಚ ತಡವಾಗಿ ಬಂದರೂ ನಿಷ್ಠುರವಾಗಿ ನಾಟಕದಿಂದ ಹೊರಗಿಡುವ ಪ್ರವೃತ್ತಿಯವರು.ಅಲ್ಲದೇ ನಟರಲ್ಲಿ ಅಭಿನಯದ ಪಕ್ವತೆ ಸಿದ್ಧಿಸಿ ತಮ್ಮ ಕಲ್ಪನೆಯ ನಟ ದೊರಕುವವರೆಗೆ ತಾಲೀಮು ಬಿಡದ ಛಲಗಾರರು.
ರಂಗದಿಂದ ಹೋರಾಟದೆಡೆಗೆ:
ರಂಗಭೂಮಿಯ ಯಾವುದೇ ಮೂಲೆಗೂ ಧಕ್ಕೆಯಾದರೂ ಅಲ್ಲಿ ನೇರ ನಡೆಯಿಂದ ಯಾರೇ ಇರಲಿ ಅವರ ವಿರುದ್ಧ ಸಟೆದು ನಿಲ್ಲುವ ಪ್ರವೀಣರು. ಅಂತೆಯೇ ಅನೇಕ ಕಷ್ಟ-ನಷ್ಟಗಳಿಂದ ರಾಘವ ಕಲಾ ಮಂದಿರ, ಜೋಳದರಾಶಿ ದೊಡ್ಡನಗೌಡ ರಂಗಮಂದಿರ, ಹಂಪಿ ಉತ್ಸವ ,ಕನ್ನಡ ಜಾಗೃತಿ,ಕನ್ನಡ ಸಂಸ್ಕೃತಿ ಪ್ರಾಯೋಜನೆ ಮತ್ತು ಆಯೋಜನೆಗಳ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಮುಂದಾದವರು. ಇವರು ತಮ್ಮ ಸ್ವಂತ ಬುದ್ಧಿಶಕ್ತಿ ಸಾಮರ್ಥ್ಯಗಳಿಂದ ಹೋರಾಟಗಳಿದವರೇ ಹೊರತು ಯಾರ ಬೆಂಬಲದಿಂದಲ್ಲ.
ಬಹುಮಾನಗಳ ಸುರಿಮಳೆ:
* ೧೯೮೩: ಪ್ರಥಮ ಕಥೆ ಬಯಲ ಪ್ರಜಾವಾಣಿಯಲ್ಲಿ ಪ್ರಕಟ, ನಂತರ ಸುಧಾ, ತರಂಗ, ಪ್ರಜಾವಾಣಿ, ಮಯೂರ, ಉದಯವಾಣಿ ಇತ್ಯಾದಿ ಪತ್ರಿಕೆಗಳಲ್ಲಿ ಹಲವಾರು ಕಥೆ/ಕವನ ಪ್ರಕಟ.
* ೧೯೮೭: ಪ್ರಜಾವಾಣಿ ದೀಪಾವಳಿ ಶಿಶುಕಾವ್ಯ ಸ್ಪರ್ಧೆಯಲ್ಲಿ ಮೆಚ್ಚುಗೆ ಪಡೆದ ರಾಮನ ಮರ ಪ್ರಕಟ.
* ೧೯೮೮: ಪ್ರಜಾವಾಣಿ ದೀಪಾವಳಿ ಶಿಶುಕಾವ್ಯ ಸ್ಪರ್ಧೆಯಲ್ಲಿ ಸೈತಾನನ ಕಥನಕ್ಕೆ ಪ್ರಥಮ ಬಹುಮಾನ.
* ೧೯೮೯: ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆಯಲ್ಲಿ ತೀರ್ಪುಗಾರರ ಮೆಚ್ಚುಗೆ ಪಡೆದ ಕಥೆ ಕುಣಿಯಿತೆಂದರೆ ನಂದಿಕೋಲು.
* ೧೯೯೩: ಬೆಂಗಳೂರು ದಿ ಒರಿಯೆಂಟಲ್ ಲಾಂಗ್‌ಮನ್ ಪಬ್ಲಿಕೇಷನ್ ಹೊರತಂದ ಹೂಬುಟ್ಟಿ ಮಕ್ಕಳ ಕವನ ಸಂಗ್ರಹದಲ್ಲಿ ಸೈತಾನನ ಕಥನ ಪ್ರಕಟ.
* ೧೯೯೭: ಬಚ್ಚಿಟ್ಟು ಕೊಂಡವರು ನಾಟಕ ಪ್ರಕಟ.
* ೧೯೯೯: ಕುಣಿಯಿತೆಂದರೆ ನಂದಿಕೋಲು, ಕಥಾಸಂಕಲನ ಬೆಂಗಳೂರಿನ ಅಂಕುರ ಪ್ರಕಾಶನದಿಂದ.
* ೨೦೦೩: ಗುಲ್ಬರ್ಗಾ ವಿಶ್ವವಿದ್ಯಾಲಯ ಏರ್ಪಡಿಸಿದ ಕಥಾ ಸ್ಪರ್ಧೆಯಲ್ಲಿ ಬಂಧ ಕಥೆಗೆ ಪ್ರಶಸ್ತಿ, ರಿಸರ್ವ ಬ್ಯಾಂಕ್ ಮತ್ತು ಭಾರತೀಯ ಸ್ಟೇಟ್ ಬ್ಯಾಂಕ್ ಉದ್ಯೋಗಿಗಳ ರಾಜ್ಯಮಟ್ಟದ ಕಲಾ ಸ್ಪರ್ಧೆಯಲ್ಲಿ ಹಲವಾರು ಕಥೆಗಳಿಗೆ ಬಹುಮಾನ.
* ೨೦೦೭ ರಲ್ಲಿ ಬೆಂಗಳೂರಿನ ಪ್ರಿಸಂ ಸಂಸ್ಥೆ ಶ್ರೀ ಎಸ್. ದಿವಾಕರ್ ಸಂಪಾದಕತ್ವದಲ್ಲಿ ಹೊರತಂದ ಕನ್ನಡದ ಅಲೆ ಸಣ್ಣ ಕಥೆಗಳ ಸಂಕಲನಕ್ಕೆ ಬೆಳ್ಳಿ ಪರದೆ ಕಥೆ ಆಯ್ಕೆ.
* ೨೦೦೮ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸುವರ್ಣ ಕಾವ್ಯ ಸಂಕಲನಕ್ಕೆ ಪಟಾಕಿ ಕವನ ಆಯ್ಕೆ.
* ೨೦೧೦ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಮೂರು ನಾಟಕಗಳು ಪ್ರಕಟ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆ.
ರಚಿಸಿ ನಿರ್ದೇಶಿಸಿದ ಯಶಸ್ವಿ ನಾಟಕಗಳು:
ಜಗದೀಶರ ಕುಂಚದಲ್ಲಿ ಅರಳಿ ನಿಂತ ಹೂಗಳು.
* ಒಂದು ಊರಿನ ಕಥೆ ೧೯೭೮
* ಬಚ್ಚಿಟ್ಟುಕೊಂಡವರು ೧೯೮೦
* ನೆಲದಡಿಯ ಬುರುಡೆಗಳು ೧೯೯೦
* ಸತ್ಕಾರ್ಯ ಪುರುಷ ಸಕ್ಕರೆ ಕರಡೀಶ ೨೦೦೦
* ಪುರಂದರದಾಸ ೨೦೦೫
* ಹೀಗೊಬ್ಬ ಅಮ್ಮನ ಕಥೆಯು ೨೦೦೭
* ಕಾಗಿನೆಲೆಯ ಕನಕದಾಸ ೨೦೦೮
* ಟೆನ್‌ಷನ್ ಫ್ರೀ ಉಂಗುರ ೨೦೦೮
* ಶ್ರೀ ಕೃಷ್ಣದೇವರಾಯ ೨೦೦೯
* ಮಂಜುಕವಿದ ಹಾದಿ ೨೦೦೯
* ಕವಲು ದಾರಿ ೨೦೧೦
* ಮಹಾದೇವನೀತ ಅಲ್ಲೀಪುರ ತಾತ ೨೦೧೩
* ಎಂಥ ಮಹಿಮನೀತ ಗೂಳ್ಯದ ಗಾದಿಲಿಂಗಪ್ಪ ತಾತ ೨೦೧೦
* ಮಹಮಹೀನಿತ ಚೆಳ್ಳಗುರ್ಕಿ ಯರ್ರಿತಾತ.ಮತ್ತಿತರೆ.
ನಿರ್ದೇಶಿಸಿದ ಇತರ ನಾಟಕಗಳು:
ಶಬರಮಲೆ ಸ್ವಾಮಿ ಅಯ್ಯಪ್ಪ, ಶ್ರೀನಿವಾಸ ಕಲ್ಯಾಣ, ಸತ್ಯ ಹರಿಶ್ಚಂದ್ರ, ಕಲ್ಯಾಣ ಕಾಂತ್ರಿ, ವರ ನೋಡಿ ಹೆಣ್ಣು ಕೊಡು, ಅಪರಿಚಿತ, ಕಲ್ಯಾಣದಣ್ಣ ಬಾರೋ ಬಸವಣ್ಣ, ದಾರಿ ಯಾವುದಯ್ಯ ಮುಂದೆ.
ಹಲವಾರು ಕಂಪನಿ ನಾಟಕಗಳಲ್ಲದೆ, ಜಡಭರತದ ಕದಡಿದ ನೀರು, ಕುಂಬಾರರ ಬೆಪ್ಪುತಕ್ಕಡಿ ಬೊಳೆ ಶಂಕರ, ಮುಂತಾದ ಪ್ರಾಯೋಗಿಕ ನಾಟಕಗಳಲ್ಲಿ ಅಭಿನಯ.
ಹಲವಾರು ರಾಜ್ಯ ಮಟ್ಟದ ನಾಟಕ ಸ್ಪರ್ಧೆಗಳಲ್ಲಿ ಬಿಚ್ಚಿಟ್ಟು ಕೊಂಡವರು, ನೆಲದಡಿಯ ಬುರುಡೆಗಳು, ಮಂಜು ಕವಿದ ಹಾದಿ, ನಾಟಕಗಳಿಗೆ ಶ್ರೇಷ್ಠ ರಚನೆ ಶ್ರೇಷ್ಠ ನಿರ್ದೇಶನ ಪ್ರಶಸ್ತಿ.
ಹಂಪಿ ಉತ್ಸವ, ಗಡಿನಾಡು ಉತ್ಸವ, ಧಾರವಾಡ ಉತ್ಸವ, ಮೈಸೂರು ರಂಗಾಯಣದ ಬಹುರೂಪಿ ನಾಟಕೋತ್ಸವ, ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನ, ಬೆಂಗಳೂರು ಎ.ಡಿ.ಎ. ರಂಗಮಂದಿರ, ರವೀಂದ್ರ ಕಲಾಕ್ಷೇತ್ರಗಳಲ್ಲಿ ನಾಟಕ ಪ್ರದರ್ಶನ, ರಾಘವ ಮೆಮೋರಿಯಲ್ ಅಸೊಸಿಯೇಷನ್ ಮತ್ತು ಬಳ್ಳಾರಿ ಕಲ್ಚರಲ್ ಯಾಕ್ವಿವಿಟೆಸ್ ಅಸೋಸಿಯೇಷನ್ ಮೂಲಕ ಸಾಮಾಜಿಕ,ಸಂದೇಶಾತ್ಮಕ ನಾಟಕಗಳ ಪ್ರದರ್ಶನ. ಹಾಗೂ ಏಡ್ಸ್ ಪ್ರವನ್ಷನ್ ಸೊಸೈಟಿ, ಬಳ್ಳಾರಿ ಜಿಲ್ಲಾ ಸಾಕ್ಷರತಾ ಸಮಿತಿ ಬಳ್ಳಾರಿ ಜಿಲ್ಲಾ ಪೋಲಿಸ್ ಇಲಾಖೆ, ಮಹಾನಗರ ಪಾಲಿಕೆ ಫ್ಯಾಮಿಲಿ ಪ್ಲಾನಿಂಗ್ ಅಸೊಸಿಯೇಷನ್ ಆಪ್ ಇಂಡಿಯಾ, ಮೈರಾಡಾ, ಮಹಿಳಾ ಸಮಾಖ್ಯ ಮುಖಾಂತರ ಹಲವಾರು ಸಂಸ್ಥೆ, ಇಲಾಖೆಗಳ ಸಹಯೋಗದಲ್ಲಿ ಏಡ್ಸ್, ಲಿಂಗ ತಾರತಮ್ಯ ಸಾಕ್ಷರತೆ, ಆರೋಗ್ಯ ರಸ್ತೆ ಸುರಕ್ಷತೆ ಪರಿಸರ, ಬಾಲಕಾರ್ಮಿಕ, ಅಸ್ಪೃಶ್ಯತೆ, ಮಹಿಳಾ ಸಬಲೀಕರಣ, ಕಾನೂನಿನ ನೆರವು ಇತ್ಯಾದಿ ವಿಷಯ ಕುರಿತು ಜನಜಾಗೃತಿಗಾಗಿ ಬೀದಿನಾಟಕ ಪ್ರದರ್ಶನ.
ರಂಗ ಪುರಸ್ಕಾರಗಳು:
ಇವರು ರಂಗಕಾಯಕವನ್ನು ಗುರುತಿಸಿ ಅನೇಕ ಸಂಘ ಸಂಸ್ಥೆಗಳು ಇವರಿಗೆ ರಂಗ ಸನ್ಮಾನ ಮಾಡಿವೆ.ಅವುಗಳಲ್ಲಿ ಕೆಲವೊಂದು ಇಲ್ಲಿವೆ.
* ೨೦೦೭: ಕರ್ನಾಟಕ ನಾಟಕ ಅಕಾಡೆಮಿಯ ಸುವರ್ಣ ಕರ್ನಾಟಕ ಗೌರವ ಪುರಸ್ಕಾರ.
* ೨೦೦೮ ಡಾ.ಸುಭಾಷ್ ಭರಣಿ ಪ್ರಶಸ್ತಿ.
* ೨೦೦೯ ಬಸವ ಸಿರಿ ಪ್ರಶಸ್ತಿ.
೭೦೦ ಕ್ಕೂ ಹೆಚ್ಚು ನಾಟಕ ಪ್ರದರ್ಶನಗಳಲ್ಲಿ ನಟನೆ, ನಿರ್ದೇಶನ ಯಶಸ್ವಿ ನಾಟಕಗಳ ರಚನೆ.
* ೧೯೭೮ ರಿಂದ ೨೦೦೩ ರವರಗೆ ೨೫ ವರ್ಷ ಮಯೂರ ಕಲಾ ಸಂಘದ ಮೂಲಕ ಮತ್ತು ೨೦೦೪ ರಲ್ಲಿ ಅಭಿನಯ ಕಲಾಕೇಂದ್ರ ಸ್ಥಾಪಿಸಿ ಇದುವರೆಗೆ ೭೦೦ ಕ್ಕೂ ಹೆಚ್ಚು ರಂಗಪ್ರದರ್ಶನಗಳು ಹಲವಾರು ರಾಜ್ಯ ಮಟ್ಟದ ನಾಟಕ ಸ್ಪರ್ಧೆಗಳಲ್ಲಿ ಪ್ರಶಸ್ತಿ ಪುರಸ್ಕಾರ
ಜಗದೀಶ್‌ರವರು ಮಣ್ಣಿನೊಳಗಿನ ಖನಿಜದಂತೆ ಅಗೆದಾಗ ಮಾತ್ರ ಬೆಲೆ ಗೊತ್ತಾಗುವುದು. ಇವರು ಬಳ್ಳಾರಿಯಲ್ಲಿದ್ದು ಇಂದಿನ ಯುವಕರಲ್ಲಿ ಇವರ ಮಹತ್ವ ತಿಳಿಯದಿರುವುದು ದುರದೃಷ್ಟಕರ ಸಂಗತಿ ಎನಿಸಿದೆ. “ಕಾಲಾಯ ತಸ್ಮೈ ನಮಃ " ಅಂದರೆ ಕಾಲವೇ ಎಲ್ಲವನ್ನು ಹೇಳುತ್ತದೆ. ಅಲ್ಲಿಯವರೆಗೆ ಕಾಯಬೇಕು” ಎಂಬುದೇ ಇಂದಿನ ಕಲಾವಿದರಿಗೆ ಇವರು ನೀಡುವ ಹಿತನುಡಿ.
✍️ ಆರ್.ಪಿ.ಮಂಜುನಾಥ್. ಬಿ.ಜಿ.ದಿನ್ನೆ.
ಸಾಹಿತಿ ಮತ್ತು ಬರಹಗಾರರು.
9379857775
manjuamazing7@gmail.com

Comments
Post a Comment