ಅಸಮರ್ಥರು ಆಡಳಿತದ ದ್ಯೋತಕವೇ ಕೋಡ್ ರೆಡ್
ಯಾವುದೇ ದೋಷಪೂರಿತ ವ್ಯವಸ್ಥೆಯಲ್ಲಾಗಲಿ, ಮೇಲಾಗಿ ಎಲ್ಲೆಡೆ ಜೇನಿನ ಮಳೆ ಸುರಿಯುತ್ತಿದೆ,ಹಾಲಿನ ಹೊಳೆ ಹರಿಯುತ್ತಿದೆ ಎಂಬ ಭ್ರಮೆಯಲ್ಲಿರುವ ಅಸಮರ್ಥರ ಆಡಳಿತದಲ್ಲಾಗಲಿ ಜನ ಸಾಮಾನ್ಯರ ಬದುಕಿನ ಸ್ಥಿತಿಗತಿಗಳು ಹೇಳತೀರದು. ಕ್ಷಣಕ್ಷಣಕ್ಕೂ ಭಯದ ನೆರಳಿನಲ್ಲೇ ಬದುಕು ಸವೆಸುವಂತಹ ಸಂದರ್ಭಗಳೇ ಅಧಿಕವಾಗಿರುತ್ತವೆ.ಅಲ್ಲದೆ ಎತ್ತತ್ತೆಲೂ ಅರಾಜಕತೆ, ಅಸಮಾನತೆ, ಅಮಾನವೀಯತೆಯೇ ತಾಂಡವವಾಡುವಂತಹ ಸ್ಥಿತಿ. ಇಂತಹ ಸಂದಿಗ್ಧ ಪರಿಸ್ಥಿತಿಯ ಸ್ಥೂಲ ಚಿತ್ರಣ ಸಿ.ಜಿ.ಕೆ ನಾಟಕೋತ್ಸವದಲ್ಲಿ ಪ್ರಯೋಗಗೊಂಡ ಡಾ.ಇಂದುದೀಪ್ ಸಿನ್ಹಾ ನಿರ್ದೇಶನದ 'ಕೋಡ್ ರೆಡ್' ನಾಟಕದಲ್ಲಿ ಅನಾವರಣಗೊಂಡಿತು. ಇಡೀ ನಾಟಕವನ್ನು ನೃತ್ಯ ಮತ್ತು ಶೈಲೀಕೃತ ಚೌಕಟ್ಟಿನಲ್ಲಿ ಮನೋವಿಜ್ಞಾನದ ಗುಣಾವಗುಣಗಳೊಂದಿಗೆ ಇರುವ ವಾಸ್ತವ ಕಥೆಯನ್ನೇ ಅದ್ಭುತವಾಗಿ ಹೆಣೆಯಲಾಗಿತ್ತು. ಸಾಮೂಹಿಕ ಅತ್ಯಾಚಾರಕ್ಕೊಳಗಾದ ಮಹಿಳೆಯೊಬ್ಬಳು ನರಳುತ್ತಾ ಆಸ್ಪತ್ರೆ ಸೇರಿ ಜಡಸ್ಥಿತಿಗೆ ತಲುಪಿ ನಿಸ್ತೇಜಗೊಂಡಿರುತ್ತಾಳೆ.ಆದರೆ ಯುದ್ಧಭೂಮಿಯಲ್ಲಿ ಪ್ರತಿನಿತ್ಯ ಆ ಹೆಣಗಳ ರಾಶಿ,ಯುದ್ಧದ ಪರಿಣಾಮಗಳನ್ನು ಸ್ವ ಅನುಭವಗಳಿಂದ ಕಣ್ತುಂಬಿಕೊಂಡು ರೋಸಿ ಹೋಗಿ ಕೊನೆಗೆ ದಾರಿಗಾಣದೆ ಆಸ್ಪತ್ರೆಯೊಂದಕ್ಕೆ ವರ್ಗವಾಗಿ ಬಂದ ಮನಃಶಾಸ್ತ್ರಜ್ಞನ ಒಡನಾಟದಿಂದ ಆ ಶೋಷಿತಳು ಪುನಃ ಜೀವನದಲ್ಲಿ ಹೊಸ ಬೆಳಕನ್ನು ಕಂಡುಕೊಂಡು ಮಗುವನ್ನು ಉಳಿಸಿಕೊಳ್ಳಲು ನಿರ್ಧರಿಸುತ್ತಾಳೆ.ಇಲ್ಲಿ ಸದಾ ದ್ವೇಷದ ದಳ್ಳುರಿಯಲ್ಲಿ ಬೇಯುತ್ತಿರುವ ಮನಸ್ಸುಗಳಿಗೆ ಶಾಂತಿಯ ನೆಲೆಯನ್ನು ತೋರಿಸುವ ಅಪೂರ್ವವಾದ ಸಂದೇಶಗಳನ್ನು ಬಿತ್ತರಿಸುವ ದೃಶ್ಯಗಳಂತೂ ಕಣ್ಣಕಟ್ಟುವಂತಹವು.ಪ್ರಮುಖವಾಗಿ ಈಗಾಗಲೇ ಕ್ರೂರಿಗಳ ದುಷ್ಟತನಕ್ಕೆ ಒಳಗಾಗಿ ನಮ್ಮನ್ನಗಲಿದ ದುರ್ಬಲ ಹೆಣ್ಮನಗಳನ್ನು ರಂಗದಲ್ಲಿ ಅವಿರ್ಭವಿಸಿ ತಮ್ಮ ನೋವುಗಳನ್ನು ತೋರುವ ದೃಶ್ಯಗಳು ನೆರದವರ ಕಂಗಳನ್ನು ತೆವಗೊಳಿಸಿದ್ದವು. ಬಂಗಾಳಿ ನಾಟಕವಾಗಿದ್ದರೂ ಮಲಗಿದ್ದವರನ್ನೂ ಎಚ್ಚರಿಸುವಂತಿದ್ದ ಸಂಗೀತ ಮತ್ತು ಬೆಳಕು ಪ್ರೇಕ್ಷಕರನ್ನು ಹಿಡಿದಿಟ್ಟಿದ್ದವು.ಅಲ್ಲದೇ ಅಭಿನಯಕ್ಕಿಂತಲೂ ಹೇರಳವಾಗಿ ಹೇರಲಾದ ಚಲನವನಲಗಳು ತುಸು ಆಸಕ್ತಿ ಎನಿಸಿದ್ದರೂ ನೀರಸವೆನಿಸಿದವು. ಪಾತ್ರಧಾರಿಗಳು ಪ್ರೇಕ್ಷಾಂಗಣದ ಮಧ್ಯಕ್ಕೆ ಬಂದು ಸಮಾಜದ ಆಗುಹೋಗುಗಳಿಗೆ ಕಾರಣ ಯಾರು? ಎಂದು ಗದರಿಸಿ ಪ್ರಶ್ನಿಸುವ ಮೂಲಕ ಪ್ರೇಕ್ಷಕರನ್ನೂ ಕಥೆಯ ಭಾಗವಾಗಿಸಿಕೊಂಡಿದ್ದು ಸಮಂಜಸವಾಗಿತ್ತು. ವೃತ್ತಿಯಲ್ಲಿ ಮನಃಶಾಸ್ತ್ರಜ್ಞರಾದ ಸಿನ್ಹಾರವರು ಕಥೆಯನ್ನು ತುಂಬಾ ಹತ್ತಿರದಿಂದ ಅಸ್ವಾಧಿಸಿರುವುದರಿಂದ ಮತ್ತು ಕಲಾವಿದರು ಸಹ ಸ್ವತಃ ಮನೋವೈದರಾಗಿರುವುರಿಂದ ನಾಟಕ ಉತ್ತಮವಾಗಿ ಮೂಡಿಬರಲು ಸಹಕಾರಿ ಎನ್ನಿಸಿತು.ಕ್ಷಣಕ್ಷಣಕ್ಕೂ ಬದಲಾಗತ್ತಿದ್ದ ನಾಟಕದ ವೇಗಕ್ಕೆ ಅಡ್ಡಿಯಾಗದ ಅನಾಗತ್ಯ ರಂಗ ಪರಿಕರಗಳನ್ನು ಬಳಸದೆ ಕೆಲವೇ ರಂಗ ಪರಿಕರಗಳ ಮತ್ತು ಸಾಂಕೇತಿಕ ರೂಪದ ವಸ್ತ್ರ ಹಾಗೂ ವಿಶಿಷ್ಟ ಬೆಳಕಿನ ವಿನ್ಯಾಸದ ಮೂಲಕ ಜನರನ್ನು ಮೋಡಿ ಮಾಡಿದ್ದಂತೂ ಸತ್ಯ.
- ಆರ್.ಪಿ.ಮಂಜುನಾಥ್.ಬಿ.ಜಿ.ದಿನ್ನೆ
ಅಂತಿಮ ಸ್ನಾತಕೋತ್ತರ ನಾಟಕ ಕಲೆ ,
ಪ್ರದರ್ಶನ ಕಲಾ ವಿಭಾಗ, ಬೆಂ.ವಿ.ವಿ.


Comments
Post a Comment