ಪ್ರೇಕ್ಷಕರ ಮನಗೆದ್ದ 'ಕಕೇಶಿಯನ್ ಚಾಕ್ ಸರ್ಕಲ್'

ಮೂರ್ತವಾಗಿಯೋ ಅಮೂರ್ತವಾಗಿಯೋ ಇಡೀ ಸೃಷ್ಟಿಯೇ ಹಣ್ತನದ ಸಂಕೇತ.ಅದರಲ್ಲೂ ತಾಯ್ತನವೆಂಬುದು ಏಕಮೇವವಾದದ್ದು.ಈ ಪ್ರಕೃತಿಯಲ್ಲಿ ಕಲ್ಮಶ ರಹಿತವಾದ ಅಂಶ ಯಾವುದಾದರೂ ಇದ್ದರೇ ಅದು ತಾಯಿಯ ಪ್ರೀತಿ ತುಂಬಿದ ಮಮತೆ ಮಾತ್ರ.ಅವಳ ಹೊರತಾಗಿ ಮತ್ತೊಂದಿಲ್ಲ.ಆ ಮಾತೃಪ್ರೇಮದ ಗುಣಗಾನ ಮಾಡುವ ನಾಟಕವಾಗಿ ಸಿ.ಜಿ.ಕೆ ನಾಟಕೋತ್ಸವದಲ್ಲಿ ಬ್ರೆಕ್ಟ್ ನ 'ಕಕೇಶಿಯನ್ ಚಾಕ್ ಸರ್ಕಲ್ ' ಅನಾವರಣಗೊಂಡಿತು.
ಜಾಗತೀಕರಣದ ಭರಾಟೆಯಲ್ಲಿ ಮಾನವೀಯ ಮೌಲ್ಯಗಳೆಲ್ಲ ಮರೆಯಾಗುತ್ತಿರುವ ಪ್ರಸ್ತುತತೆಗೆ ಅತ್ಯಾವಶ್ಯಕ ಎನಿಸುವ ನಾಟಕ ಬಿತ್ತಾರಗೊಂಡು ಪ್ರೇಕ್ಷಕರ ಮನಸೊರೆಗೊಂಡಿದ್ದಂತು ಅಕ್ಷರಶಃ ಸತ್ಯ. ಒಂದು ಮಗುವಿನ ನಿಜವಾದ ತಾಯಿಯನ್ನು ಪತ್ತೆ ಹಚ್ಚುವ ಸಲುವಾಗಿ ಸಾಕುತಾಯಿ ಮತ್ತು ಹೆತ್ತತಾಯಿಯ ನಡುವೆ ನೆಡಯುವಂತಹ ರೋಮಾಂಚಕ ಪ್ರಸಂಗವೇ ನಾಟಕದ ಕಥಾವಸ್ತು. ನಾಟಕ ಸಾಂಪ್ರದಾಯಿಕ ಕಥಾ ನಿರೂಪಣೆ ಶೈಲಿಯಲ್ಲಿಯೇ ಆರಂಭವಾದರೂ ಕ್ರಮೇಣವಾಗಿ ನಾಟಕದ ಗತಿ ಮತ್ತು ಶೈಲಿ ವಿಭಿನ್ನ ಎನ್ನಿಸುತ್ತದೆ. ಕಕೇಶಿಯನ್ ನಲ್ಲಿ ಸದಾಕಾಲ ವೈಭೋಗದಲ್ಲಿದ್ದ ದೊರೆ ಮತ್ತು ಸೊಕ್ಕಿನ ರಾಣಿಗೆ ಮುದ್ದಾದ ಮಗುವಿನ ಜನನ ನಂತರ ವೈರಿಪಡೆಯಿಂದ ದಾಳಿಯಾಗುತ್ತದೆ. ಆಗ ತರಾತುರಿಯಲ್ಲಿ ಮಗುವನ್ನೂ ಬಿಟ್ಟು ಕೇವಲ ತನ್ನ ಐಷರಾಮಿ ವಸ್ತುಗಳೊಂದಿಗೆ ರಾಣಿ ಪಲಾಯನಗೈಯುತ್ತಾಳೆ.ಆದರೆ ಆಸ್ಥಾನದ ದಾಸಿಯ ವಶವಾದ ಮಗು ಅವಳ ಹಾರೈಕೆಯಲ್ಲಿ ಬೆಳೆಯುತ್ತದೆ.ಇಲ್ಲಿ ಮಗುವಿನ ಬೆಳವಣಿಗೆಯನ್ನು ಹಾಗೂ ದಾಸಿ ಶತ್ರುಗಳಿಂದ ಮಗುವನ್ನು ಪಾರು ಮಾಡುವ ದೃಶ್ಯಗಳು ನಿರ್ದೇಶಕನ (ಬಿ.ಚಂದ್ರಕೀರ್ತಿ) ಜಾಣ್ಮೆಗೆ ಕೈಗನ್ನಡಿ ಎನಿಸಿವೆ.ಅಲ್ಲದೇ ಇದಕ್ಕೂ ಮುನ್ನ ನಡೆದ ದಾಸಿಯ ಪ್ರೇಮ ಪ್ರಕರಣಗಳು ನೆರೆದವರಲ್ಲಿ ಸ್ವ ಅನುಭವಗಳನ್ನು ಅವರವರ ಸ್ಮೃತಿಪಟಲಕ್ಕೆ ಹಾಯಿಸಿ ಮುಖದ ಮೇಲೆ ಮಂದಹಾಸ ಮೂಡಿಸಿದ್ದಂತು ಗ್ಯಾರಂಟಿ.

ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ನಾಟಕದ ಸಂಭಾಷಣೆ ಮತ್ತು ಸಂಗೀತ ಬಹುಮುಖ್ಯ ಪಾತ್ರ ವಹಿಸಿದವು.ನಾಟಕದ ಮಧ್ಯದಲ್ಲಿ ತೂರಿಬಂದ ಒಂದು ಡೈಲಾಗ್ 'ಹೆಣ್ಣಿರುವುದು ಹೊಲದ ಕಳೆ ತೆಗೆಯೋಕೆ ಮತ್ತು ಗಂಡನಿಗೆ ಕಾಲಗಲಿಸಿ ಸ್ವರ್ಗದ ಬಾಗಿಲು ತೋರಿಸೋಕೆ' ಎಂದು ಹೇಳುವ ಮೂಲಕ ಕಾಲ ಕಾಲದಿಂದಲೂ ಬಂದ ಸ್ತ್ರೀ ಶೋಷಣೆಗೆ ಉತ್ತಮ ನಿದರ್ಶನವಾಗಿತ್ತು.ನಾಟಕದ ಲಯಕ್ಕೆ ಅರ್ಥಗರ್ಭಿತವಾಗಿ ಸಾಗುತ್ತಿದ್ದ ವಿಭಿನ್ನ ಶೈಲಿಯ ಸಂಗೀತ ನಾಟಕಕ್ಕೆ ಪುಷ್ಟಿಯನ್ನು ತಂದುಕೊಟ್ಟಿತು.ಹಾಗೆಯೇ ವಸ್ತ್ರವಿನ್ಯಾಸ ಮತ್ತು ಪ್ರಸಾಧನ ಮೂಲ ನೆಲೆಯ ಪರಿಕಲ್ಪನೆ ಹೊತ್ತಿದ್ದರೂ,ಭಾಷೆಯ ಹಿನ್ನಲೆಯಲ್ಲಿ ದೇಶಿಯತೆಗೆ ಮಾರು ಹೋಗಿದ್ದವು.ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿದ್ದ ನ್ಯಾಯಾಲಯದ ದೃಶ್ಯ ಹಾಗೂ 'ಮದುವೆಯ ಅಂತ್ಯಕ್ರಿಯೆಗೆ ಬಂದ ಅತಿಥಿಗಳಿಗೆ ಸ್ವಾಗತ' ಎಂದು ತಿಳಿಹಾಸ್ಯ ಮೂಡಿಸುವ ಸಂಭಾಷಣೆ, ದೃಶ್ಯ ಬದಲಾವಣೆ ತಂತ್ರಗಾರಿಕೆಗಳು ಮತ್ತು ಮಗುವಿನ ಕೊನೆಯ ಸಂಭಾಷಣೆ ಚಪ್ಪಾಳೆ ಗಿಟ್ಟಿಸಿಕೊಳ್ಳುವಲ್ಲಿ ಪೂರ್ಣ ಯಶಸ್ವಿಯಾದವು.


😘 ಪ್ರೀತಿಯ ಮಂಜು
(ಆರ್.ಪಿ.ಮಂಜುನಾಥ್.ಬಿ.ಜಿ.ದಿನ್ನೆ)
ಬಳ್ಳಾರಿ 

Comments

  1. ತುಂಬು ಹೃದಯದ ಧನ್ಯವಾದಗಳು ಸರ್!

    ReplyDelete

Post a Comment

Popular posts from this blog

ರಂಗ ಮಾಲಿಕೆ -೩೭ ನಡೆದಾಡುತ್ತಿದ್ದ ರಕ್ತರಾತ್ರಿ 'ನಾಡಂಗ ಬಸವರಾಜ'

ರಂಗ ಮಾಲಿಕೆ -೨೧ ಆಂಧ್ರ ನಾಟಕ ಪಿತಾಮಹ ಧರ್ಮಾವರಂ ರಾಮಕೃಷ್ಣಮಾಚಾರ್ಯರು

ರಂಗ ಮಾಲಿಕೆ -೨೭ ಅದಮ್ಯ ಚೇತನದ ರಂಗಮಣಿ 'ಸೋಗಿ ನಾಗರತ್ನಮ್ಮ'.