ಬುದ್ಧ- ಬಸವ-ಅಂಬೇಡ್ಕರ್ ರ ಜನ್ಮ ದಿನಾಚರಣೆ ಅರ್ಥಪೂರ್ಣ - ಪ್ರೊ.ಬಿ.ಕೆ.ರವಿ
ಸಾಮಾಜಿಕ ವೈರುಧ್ಯಗಳನ್ನು ತಿದ್ದಿತೀಡಿದ ಬುದ್ಧ,ಬಸವ,ಅಂಬೇಡ್ಕರ್ ರ ಜನ್ಮ ದಿನಾಚರಣೆ ತುಂಬಾ ಮಹತ್ವ ಮತ್ತು ಅರ್ಥಪೂರ್ಣವಾದುದ್ದಾಗಿದೆ ಅಲ್ಲದೆ ಶ್ರಮ ಮತ್ತು ಸಮ ಸಮಾಜದ ನಿರ್ಮಾಣವೇ ಬಹುಮುಖ್ಯವಾದ ವಿಷಯವಾಗಿದೆ ಎಂದು ಕುಲಸಚಿವ ಪ್ರೊ.ಬಿ.ಕೆ.ರವಿ ತಿಳಿಸಿದರು.
ಬೆಂಗಳೂರು ವಿಶ್ವವಿದ್ಯಾಲಯ ಮತ್ತು ಪ್ರದರ್ಶನ ಕಲಾ ವಿಭಾಗದ ಸಂಯುಕ್ತಾಶ್ರಯದಲ್ಲಿ "ಬುದ್ಧ-ಬಸವ-ಅಂಬೇಡ್ಕರ್ ರ ಜನ್ಮ ದಿನಾಚರಣೆ ಹಾಗೂ ದೆಹಲಿಯಲ್ಲಿ ನಡೆದ ೮ನೇ ಥಿಯೇಟರ್ ಒಲಂಪಿಕ್ ಅಂತರರಾಷ್ಟ್ರೀಯ ನಾಟಕೋತ್ಸವದ ಪ್ರಶಸ್ತಿ ಪತ್ರ ವಿತರಣಾ ಸಮಾರಂಭ"ವನ್ನು ಉದ್ದೇಶಿಸಿ ಮಾತಾನಾಡುತ್ತಾ ಭಾಷಣಗಳು ಮಾನವೀಯ ಮೌಲ್ಯಗಳನ್ನು ಸಮಾಜದ ಮೂಲೆ ಮೂಲೆಗೆ ತಲುಪಿಸುವಲ್ಲಿ ವಿಫಲವಾಗುತ್ತಿರುವ ಈ ಸಂದರ್ಭದಲ್ಲಿ ರಂಗ ಮಾಧ್ಯಮಗಳು ಆ ಕಾರ್ಯವನ್ನು ಯಶಸ್ವಿಯಾಗಿ ಪರಿಪೂರ್ಣಗೊಳಿಸುತ್ತವೆ.ಇಂದಿನ ಸಾಮಾಜಿಕ ನ್ಯಾಯದ ರಥವನ್ನು ಎಳೆಯುವ ಪೂರ್ಣ ಜವಾಬ್ದಾರಿ ಪ್ರಸ್ತುತ ಯುವ ಸಮುದಾಯದ ಹೆಗಲ ಮೇಲೆ ನಿಂತಿದೆ ಎಂದು ಅವರು ಹೇಳಿದರು.
ನಂತರ ಮಾತಾನಾಡಿದ ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ.ಬಂಜಗೆರೆ ಜಯಪ್ರಕಾಶ ಅವರು ಒಂದೇ ಚಿಂತನೆಯಡಿಯಲ್ಲಿ ಆಲೋಚಿಸಿದ ಮಹನೀಯರ ಜಯಂತಿಯನ್ನು ಸಂಯುಕ್ತವಾಗಿ ಆಚರಿಸುವ ಅನಿವಾರ್ಯತೆ ಅವಶ್ಯಕವೆನಿಸಿದೆ. ಈ ಮೂಲಕ ಸಮಾನತೆ, ಒಗ್ಗಟ್ಟು ಮತ್ತು ಸರಳತೆಯನ್ನು ಹಾಗೂ ಜನರಿಗೆ ಮೌಲ್ಯಯುತವಾದ ಅಮೃತವಾಣಿಯನ್ನು ಜನರತ್ತ ಹರಿಸಬಹುದಾಗಿದೆ.ಇತಿಹಾಸವನ್ನರಿತರೆ ಮಾತ್ರ ಇತಿಹಾಸ ಸೃಷ್ಟಿಸಲು ಸಾಧ್ಯ.ಅಂತೆಯೇ ಮನುಕುಲ ತನ್ನ ಬಯಕೆ, ತುಮುಲಗಳ ಈಡೇರಿಕೆಯೇ ಮೂಲಕಾರ್ಯವಲ್ಲ.ಬದಲಾಗಿ ಸಮಾಜಮುಖಿಯಾದ ಇತಿಹಾಸ ಸೃಷ್ಟಿಸುವ ಶಕ್ತಿಯನ್ನು ಯುವಕರು ರೂಢಿಸಿಕೊಳ್ಳಬೇಕು ಇದಕ್ಕೆ ಉತ್ತಮ ಉದಾಹರಣೆಯಾಗಿ ಅಂಬೇಡ್ಕರ್ ನಮ್ಮ ಕಣ್ಣೆದುರಿಗಿದ್ದಾರೆ.ಬಡತನದಲ್ಲಿ ಸಾಧಿಸುವ ಛಲ ನಮ್ಮಲ್ಲಿ ಇರಬೇಕೆಂದು ಕರೆ ನೀಡಿದರು. ಇದೇ ಸಂದರ್ಭದಲ್ಲಿ ಮಾತಾನಾಡಿದ ಪ್ರೊ.ದೊಡ್ಡ ಬೋರಯ್ಯನವರು ಇತ್ತೀಚೆಗೆ ಕೇವಲ ಮೀಸಲಾತಿಯೊಂದಕ್ಕೆ ಅಂಬೇಡ್ಕರ್ ರನ್ನು ತಳಕು ಹಾಕಿ ಒಂದು ವರ್ಗದ ಪರವಾಗಿರು ವ್ಯಕ್ತಿಯೆಂಬಂತೆ ಬಿಂಬಿಸುವುದರ ಜೊತೆಗೆ ಸೀಮಿತ ಜಾತಿಯ ವ್ಯಕ್ತಿಯನ್ನಾಗಿ ನೋಡುತ್ತಿರುವುದು ನಮ್ಮ ಕಣ್ಮುಂದೆಯಿದೆ.ಇದರ ಹೊರತಾಗಿ ಸಮಕಾಲೀನ ಸಮಸ್ಯೆಗೆ ಸಂಬಂಧಿಸಿದಂತೆ ಗಡಿಭಾಗದಲ್ಲಿರುವ ಡೊಕ್ಲಾಮಾ ಹಾಗೂ ನರಳುತ್ತಿರುವ ಭಾರತದ ಅರ್ಥ ವ್ಯವಸ್ಥೆ ಸೇರಿದಂತೆ ಹಲವಾರು ಸಮಸ್ಯೆಗಳಿಗೆ ಅಂಬೇಡ್ಕರ್ ತಮ್ಮ ಕೃತಿಗಳಲ್ಲಿ ಪರಿಹಾರ ಸೂಚಿಸಿದ್ದಾರೆ ಹಾಗೂ ಸಂವಿಧಾನದ ಪ್ರತಿಯೊಂದು ವಿಧಿಗಳಲ್ಲೂ ಸ್ವಸ್ಥ ಸಮಾಜದ ನಿರ್ಮಾಣದ ಕುರಿತು ಉಲ್ಲೇಖಿಸಿದ್ದಾರೆ.ಹಾಗಾಗಿ ನಾವು ಸಂವಿಧಾನವನ್ನು ಪೂರ್ಣ ಪ್ರಮಾಣದಲ್ಲಿ ಅಭ್ಯಾಸಿಸದೆ ಕೇವಲ ಆಯ್ದು ಭಾಗಗಳನ್ನು ಎತ್ತಿಕೊಂಡು ಹರಟೆ ಕೊಚ್ಚುವುದನ್ನು ನಿಲ್ಲಿಸಬೇಕಾಗಿದೆ ಎಂದು ಅಭಿಪ್ರಾಯ ಪಟ್ಟರು.
ಇದೇ ಸಂದರ್ಭದಲ್ಲಿ ಅಧ್ಯಕ್ಷತೆಯನ್ನು ಕುಲಪತಿ ಐ.ಎಸ್.ಶಿವಕುಮಾರ್ ,ಮುಖ್ಯ ಅತಿಥಿಗಳಾಗಿ ಪ್ರೊ.ಹಂಸಿನಿ ನಾಗೇಂದ್ರ ಭಾಗವಹಿಸಿದ್ದರು.ಕಾರ್ಯಕ್ರಮದಲ್ಲಿ ೮ನೇ ಥಿಯೇಟರ್ ಒಲಿಂಪಿಕ್ ನಲ್ಲಿ ಭಾಗವಹಿಸಿದ ವಿಭಾಗದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.ನಂತರ ಅಮರಾವತಿ ಪ್ರಾರ್ಥಿಸಿದರು.ಗೋಪಾಲಕೃಷ್ಣಪ್ಪ ಮತ್ತು ಗಂಗಣ್ಣ ತಂಡದಿಂದ ಕ್ರಾಂತಿಗೀತೆ ಹಾಡಿದರು.ಪ್ರೊ.ಕೆ.ರಾಮಕೃಷ್ಣಯ್ಯ ಸ್ವಾಗತಿಸಿದರು.ಡಾ.ರಾಧಿಕಾ ರಂಜನಿ ವಂಧಿಸಿದರು. ಸುರೇಶ ನಿರೂಪಿಸಿದರು.


Comments
Post a Comment